ಕಿಶನಗಂಜ್(ಬಿಹಾರ): ಬಿಹಾರದಲ್ಲಿ 7ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರ (Kashmir Country) ಎಂದು ಉಲ್ಲೇಖಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ 12ರಿಂದ ಬಿಹಾರದ ರಾಜ್ಯ ಸರ್ಕಾರವು 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಕೈಗೊಂಡಿದೆ. ಆದರೆ, ಕಾಶ್ಮೀರ ಪ್ರತ್ಯೇಕ ರಾಷ್ಟ್ರ ಎಂಬಂತೆ ಬಿಂಬಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
7ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ What are the people of the following countries called? ಎಂಬ ಪ್ರಶ್ನೆ ವಿಭಾಗವಿದೆ. ಈ ಪ್ರಶ್ನೆ ವಿಭಾಗದಲ್ಲಿ ನೇಪಾಳ ರಾಷ್ಟ್ರದ ಜನರನ್ನು , ಇಂಗ್ಲೆಂಡ್ ದೇಶದ ಜನರನ್ನು, ಕಾಶ್ಮೀರ ರಾಷ್ಟ್ರದ ಜನರನ್ನು, ಭಾರತದ ಜನರನ್ನು ಏನೆಂದು ಕರೆಯುತ್ತಾರೆ ಎಂದು ಕೇಳಲಾಗಿದೆ. ಇದಕ್ಕೆ ಉದಾಹರಣೆಯಾಗಿ, ಚೀನಾ ರಾಷ್ಟ್ರದವರನ್ನು ಚೀನಿಯರು ಎಂದು ಕರೆಯುತ್ತಾರೆ ಎಂದು ಉತ್ತರಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳು ಉಳಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಹಾಗಾಗಿ, ಕಾಶ್ಮೀರ ರಾಷ್ಟ್ರದ ಜನರನ್ನು ಕಾಶ್ಮೀರಿಗಳು ಎಂದು ಕರೆಯಲಾಗುತ್ತದೆ ಎಂದು ಉತ್ತರಿಸಬೇಕಾಗುತ್ತದೆ. ಅಲ್ಲಿಗೆ, ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರ ಎಂಬಂತೆ ಪ್ರಶ್ನೆ ಪತ್ರಿಕೆಯಲ್ಲಿ ಬಿಂಬಿಸಲಾಗಿದೆ.
ಬಿಹಾರದ ಅರಾರಿಯಾ, ಕಿಶನ್‌ಗಂಜ್ ಮತ್ತು ಕಾಟಿಹಾರ್ ಜಿಲ್ಲೆಗಳ ಶಾಲೆಗಳ 7ನೇ ತರಗತಿ ಮಕ್ಕಳಿಗೆ ನೀಡಲಾದ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಈ ವಿವಾದಿತ ಪ್ರಶ್ನೆ ಸೇರ್ಪಡೆಯಾಗಿದೆ.
ನಾವು ಈ ಪ್ರಶ್ನೆ ಪತ್ರಿಕೆಯನ್ನು ಬಿಹಾರ ಶಿಕ್ಷಣ ಮಂಡಳಿಯಿಂದ ಪಡೆದುಕೊಂಡಿದ್ದೇವೆ. ಕಾಶ್ಮೀರದ ಜನರನ್ನು ಏನೆಂದು ಕರೆಯುತ್ತಾರೆಂದಾಗಬೇಕಿತ್ತು. ಆದರೆ, ತಪ್ಪಾಗಿ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯುತ್ತಾರೆ ಎಂದಾಗಿದೆ. ಇದು ಸಹಜವಾಗಿರುವಂಥ ತಪ್ಪು ಎಂದು ಮುಖ್ಯ ಶಿಕ್ಷಕ ಎಸ್ ಕೆ ದಾಸ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ವಿಷಯವನ್ನು ಮತ್ತಷ್ಟು ವಿವಾದಗೊಳಿಸಲು ಮುಂದಾಗಿರುವ ಬಿಜೆಪಿ ನಾಯಕರು, ಇದೊಂದು ಪಿತೂರಿಯಾಗಿದ್ದು, ಕೇಂದ್ರ ಶಿಕ್ಷಣ ಸಚಿವರು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಶಿಕ್ಷಣ ತಜ್ಞರು ಕೂಡ ಸರ್ಕಾರದ ಬೇಜವಾಬ್ದಾರಿಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ | Condom Remarks | ಕಾಂಡೋಮ್ಸ್ ಕೇಳುತ್ತೀರಿ ಎಂದ ಉಡಾಫೆ ಅಧಿಕಾರಿ ವಿರುದ್ಧ ಬಿಹಾರ ಸಿಎಂ ಕ್ರಮ