ಪಟನಾ: ಬಿಹಾರ ವಿಧಾನಸಭೆಯಲ್ಲಿ ಇಂದು ಮಧ್ಯಾಹ್ನ ಸಿಎಂ ನಿತೀಶ್ ಕುಮಾರ್ ವಿಶ್ವಾಸ ಮತ ಯಾಚನೆ ನಡೆಯಲಿದೆ. ಅದಕ್ಕೂ ಮುನ್ನ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಬಿಜೆಪಿಯವರು. ಹಾಗೇ, ಬಿಟ್ಟು ಹೊರಡುವಾಗ, ಮಹಾ ಘಟ್ ಬಂಧನ್ ಸರ್ಕಾರ ತನ್ನ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಆಗಸ್ಟ್ ಪ್ರಾರಂಭದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಕಳಚಿಬಿದ್ದು, ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಮಹಾ ಘಟ್ ಬಂಧನ್ ಸರ್ಕಾರದ ಶಾಸಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಇಂದು ಬಿಹಾರದಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭಗೊಂಡಿದ್ದು, ಪ್ರಾರಂಭದಲ್ಲಿಯೇ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಸದನದಲ್ಲಿ ತಮ್ಮ ರಾಜೀನಾಮೆ ಘೋಷಿಸಿದ ನಂತರ ಅವರು 20 ನಿಮಿಷ ಭಾಷಣ ಮಾಡಿದರು. ಬಳಿಕ ತರಾತುರಿಯಲ್ಲಿ ನಿರ್ಗಮಿಸಿದರು. ಬಿಜೆಪಿ ಶಾಸಕರೆಲ್ಲ ‘ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್’ ಎನ್ನುತ್ತ ಸಿನ್ಹಾ ಹಿಂದೆಯೇ ಹೋದರು. ಅವರೆಲ್ಲ ಕೇಸರಿ ಬಣ್ಣದ ರುಮಾಲನ್ನು ತಲೆಗೆ ಧರಿಸಿದ್ದರು. ಕೆಲವರು ಕೇಸರಿ ವಸ್ತ್ರ ಧರಿಸಿದ್ದರು.
ಬೆಳಗ್ಗೆ ಅಧಿವೇಶನ ಶುರುವಾದ ಬಳಿಕ ರಾಜೀನಾಮೆ ಸಲ್ಲಿಸುವುದಾಗಿ ಹೇಳಿ, ಮಾತನಾಡಿದ ಅವರು, ‘ಬಿಹಾರದಲ್ಲಿ ಏಕಾಏಕಿ ಸರ್ಕಾರ ಬದಲಾಯಿತು. ನನ್ನಷ್ಟಕ್ಕೇ ಬಿಟ್ಟಿದ್ದರೆ ನಾನು ರಾಜೀನಾಮೆ ಕೊಡುತ್ತಿದ್ದೆ, ಆದರೆ ನನ್ನ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು ಎಂದು ಗೊತ್ತಾಗಿ, ನಿರ್ಧಾರ ಬದಲಿಸಿ, ತಡ ಮಾಡಿದೆ. ಈಗ ಈ ಅವಿಶ್ವಾಸ ಗೊತ್ತುವಳಿಗೆ ಪ್ರತಿಕ್ರಿಯೆ ನೀಡುವುದು ನನ್ನ ಕರ್ತವ್ಯ. ಹಾಗೇ, ಅವಿಶ್ವಾಸ ನಿರ್ಣಯ ಮಂಡನೆ ಮಾಡುವಾಗ ಕೆಲವು ಶಾಸಕರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಾನು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಎಂದೂ ಹೇಳಿದ್ದಾರೆ. ಆದರೆ ನಾನಿದನ್ನು ಒಪ್ಪುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: Land For Job Case | ಬಿಹಾರದಲ್ಲಿಂದು ವಿಶ್ವಾಸ ಮತ ಯಾಚನೆ; ಇಂದೇ ಸಿಬಿಐ ರೇಡ್ !