ಪಟನಾ: ಬಿಹಾರದ ಸರನ್ ಜಿಲ್ಲೆಯ (Saran District) ಸರಯೂ ನದಿಯಲ್ಲಿ (Sarayu River) ಬುಧವಾರ (ನವೆಂಬರ್ 1) ದೋಣಿಯೊಂದು (Boat Capsizes) ಮುಳುಗಿದೆ. ಒಟ್ಟು 18 ಜನ ಪ್ರಯಾಣಿಸುತ್ತಿದ್ದ ದೋಣಿ ಮುಳುಗಿದ್ದು, ಇದುವರೆಗೆ ಮೂರು ಶವಗಳು ಪತ್ತೆಯಾಗಿವೆ. 6 ಜನರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಇನ್ನೂ 9 ಜನರ ರಕ್ಷಣೆಗಾಗಿ ತೀವ್ರ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ದೋಣಿ ಮುಳುಗಿದೆ ಎಂದು ತಿಳಿದುಬಂದಿದೆ. ದೋಣಿ ಮುಳುಗಿ ಹಲವು ಗಂಟೆ ಕಳೆದಿರುವುದರಿಂದ ನೀರಿನಲ್ಲಿ ನಾಪತ್ತೆಯಾದ 9 ಜನ ಕೂಡ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಒಂಬತ್ತು ಜನರ ರಕ್ಷಣೆಗೆ ರಾತ್ರಿಯಾದರೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
“ಮಾಂಝಿ ಬಳಿಯ ಮಾಟಿಯಾರ್ ಘಾಟ್‌ನಲ್ಲಿ ಬೋಟ್ ಚಲಿಸುತ್ತಿತ್ತು. ಸಣ್ಣ ಬೋಟ್‌ನಲ್ಲಿ 18 ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಮಹಿಳೆಯರು ಹಾಗೂ ಪುರುಷರು ಇರುವ ಹಡಗು ಚಲಿಸುತ್ತಿರುವಾಗಲೇ ಬೃಹತ್ ಅಲೆಯೊಂದು ಅಪ್ಪಳಿಸಿರುವ ಸಾಧ್ಯತೆ ಇದೆ. ಹಾಗಾಗಿಯೇ, ಇಡೀ ಹಡಗು ಮಗುಚಿದೆ. ಇದುವರೆಗೆ ಮೂವರ ಶವವನ್ನು ಹೊರತೆಗೆಯಲಾಗಿದೆ. ಆರು ಜನರನ್ನು ರಕ್ಷಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Drowned In River : ಪ್ರತ್ಯೇಕ ಕಡೆಗಳಲ್ಲಿ ಜಾನುವಾರ ತೊಳೆಯಲು ಹೋದ ಮೂವರು ಯುವಕರು ನೀರುಪಾಲು
ನದಿಯಲ್ಲಿ ರಕ್ಷಣಾ ಸಿಬ್ಬಂದಿಯು ರಾತ್ರಿಯಾದರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದುರಂತದ ಸುದ್ದಿ ತಿಳಿದ ನೂರಾರು ಗ್ರಾಮಸ್ಥರು ಕೂಡ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸರನ್ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಕೇರಳದ ತಾನೂರ್ ತುವಾಲ್ ಬೀಚ್ ಬಳಿ ಪ್ರವಾಸಿಗರಿದ್ದ ದೋಣಿ ಮುಳುಗಿ 18 ಮಂದಿ ಮೃತಪಟ್ಟಿದ್ದರು. 40ಕ್ಕೂ ಅಧಿಕ ಪ್ರವಾಸಿಗರಿದ್ದ ದೋಣಿ ಸಂಜೆ ಏಳು ಗಂಟೆಯ ವೇಳೆಗೆ ಮುಳುಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಮಧ್ಯರಾತ್ರಿವರೆಗೂ ಶೋಧ ಕಾರ್ಯ ನಡೆಸಿ ಶವಗಳನ್ನು ಹೊರತೆಗೆದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ