Site icon Vistara News

Bridge Collapse: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತ; 9 ದಿನದಲ್ಲಿ 5ನೇ ಪ್ರಕರಣ!

Bridge Collapse

Bihar Bridge Collapse: 5th In 9 Days, Under Construction For 4 Years, Collapses

ಪಟನಾ: ಬಿಹಾರದಲ್ಲಿ (Bihar) ಕಳಪೆ ಕಾಮಗಾರಿಗಳು, ಸರ್ಕಾರದ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಲೇ ಇವೆ. ಅದರಲ್ಲೂ, ಕಳೆದ ಕೆಲ ದಿನಗಳಲ್ಲಿ ಸಾಲು ಸಾಲು ನಿರ್ಮಾಣ ಹಂತದ ಸೇತುವೆಗಳು ಕುಸಿಯುತ್ತಿರುವುದು (Bridge Collapse) ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇದರ ಬೆನ್ನಲ್ಲೇ, ಶುಕ್ರವಾರ (ಜೂನ್‌ 28) ಬಿಹಾರದ ಮಧುಬನಿ (Madhubani Region) ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಕುಸಿದಿದೆ. ಆ ಮೂಲಕ ಕಳೆದ 9 ದಿನದಲ್ಲಿ ಬಿಹಾರದಲ್ಲಿಯೇ 5 ಸೇತುವೆಗಳು ಕುಸಿದಂತಾಗಿದೆ.

ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭೂತಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯು ಕುಸಿದಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 2021ರಿಂದಲೂ ಕೇವಲ 75 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದೆ. ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಇದಕ್ಕಾಗಿಯೇ ವಿಳಂಬವಾಗುತ್ತಿದೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಈಗ ಸೇತುವೆಯು ನಿರ್ಮಾಣ ಹಂತದಲ್ಲಿಯೇ ಕುಸಿದಿರುವುದು ಜನರ ಆಕ್ರೋಶವನ್ನು ಕೆರಳಿಸಿದೆ.

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.

ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಗುರುವಾರವಷ್ಟೇ (ಜೂನ್‌ 27) ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್‌ 23ರಂದು ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಸಣ್ಣ ಸೇತುವೆಯೊಂದು ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್‌ 22ರಂದು ಕೂಡ ಸಿವಾನ್‌ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್‌ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.  

ಇದನ್ನೂ ಓದಿ: ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

Exit mobile version