ಪಟನಾ: ನಿತೀಶ್ ಕುಮಾರ್ ಉಪರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಅವರನ್ನು ಉಪರಾಷ್ಟ್ರಪತಿ ಮಾಡಬೇಕು ಎಂದು ಜೆಡಿಯು ಪಕ್ಷದ ಹಲವು ಪ್ರಮುಖರು ಬಿಜೆಪಿ ವರಿಷ್ಠರ ಎದುರು ಪ್ರಸ್ತಾಪ ಮಾಡಿದ್ದರು. ಆದರೆ ಬಿಜೆಪಿ ಉಪರಾಷ್ಟ್ರಪತಿ ಹುದ್ದೆಗೆ ಅವರನ್ನು ಅಭ್ಯರ್ಥಿ ಮಾಡಲಿಲ್ಲ. ಇದು ಕೂಡ ನಿತೀಶ್ ಕುಮಾರ್ ಅಸಮಾಧಾನಕ್ಕೆ ಪ್ರಮುಖ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದರು. ಈ ಹೇಳಿಕೆಗೆ ಇದೀಗ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ವಾಟ್ ಎ ಜೋಕ್ ! (ಇದೆಂಥಾ ತಮಾಷೆ)’ ಎಂದು ನಕ್ಕಿದ್ದಾರೆ.
ನಾನು ಉಪರಾಷ್ಟ್ರಪತಿ ಹುದ್ದೆ ಬಯಸಿದ್ದೆ ಎಂಬುದು ಪಕ್ಕಾ ಸುಳ್ಳು. ಇದೊಂದು ಬೋಗಸ್. ನನಗೆ ಅಂಥ ಆಸೆಗಳು ಯಾವವೂ ಇರಲಿಲ್ಲ. ಬಿಜೆಪಿ ಆಯ್ಕೆ ಮಾಡಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅಭ್ಯರ್ಥಿಗಳಿಗೆ ನಾವೆಷ್ಟು ಬೆಂಬಲ ಕೊಟ್ಟೆವು, ಪೂರ್ಣ ಮನಸಿಂದ ಒಪ್ಪಿಕೊಂಡೆವು ಎಂಬುದನ್ನು ಎಲ್ಲರೂ ನೋಡಿದ್ದಾರೆ. ನನಗೇನಾದರೂ ಆ ಆಸೆಯಿದ್ದಿದ್ದರೆ ಉಪರಾಷ್ಟ್ರಪತಿ ಚುನಾವಣೆ ಆಗುವವರೆಗೂ ಕಾಯುತ್ತಿರಲಿಲ್ಲ. ಅಭ್ಯರ್ಥಿ ಆಯ್ಕೆಯಾಗುತ್ತಿದ್ದಂತೆ ಹೊರಗೆ ಬೀಳುತ್ತಿದ್ದೆ. ರಾಷ್ಟ್ರಪತಿ-ಉಪರಾಷ್ಟ್ರಪತಿ ಚುನಾವಣೆ ಮುಗಿದ ಮೇಲೆ ನಮ್ಮ ಆಂತರಿಕ ಸಭೆ ನಡೆದಿದ್ದು ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಗೇ, ‘ಅವರೆಲ್ಲ ನನ್ನ ಬಗ್ಗೆ ತುಂಬ ಮಾತಾಡಲಿ, ನನ್ನ ಬಗ್ಗೆ ಮಾತಾಡಿದಷ್ಟೂ ಅವರ ಸ್ಥಾನ ಇನ್ನಷ್ಟು ಉನ್ನತಿಗೆ ಹೋಗುತ್ತದೆ’ ಎಂದು ಟೀಕಿಸಿದ್ದಾರೆ.
ಆಗಸ್ಟ್ 9ರಂದು ಸಂಜೆ ಬಿಜೆಪಿಯೊಂದಿಗೆ ಮೈತ್ರಿ ಕಡಿತಗೊಳಿಸಿಕೊಂಡಿದ್ದ ನಿತೀಶ್ ಕುಮಾರ್, ಮರುದಿನವೇ ಆರ್ಜೆಡಿ-ಕಾಂಗ್ರೆಸ್ ಜತೆ ಸೇರಿ ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿದ್ದಾರೆ. ಆರ್ಜೆಡಿ ಜತೆ ಇರಲು ಸಾಧ್ಯವಿಲ್ಲ ಎಂದೇ 2017ರಲ್ಲಿ ಮಹಾ ಘಟ್ ಬಂಧನ್ ಬಿಟ್ಟು ಬಂದಿದ್ದ ನಿತೀಶ್ ಕುಮಾರ್ ಮತ್ತೆ ಅಲ್ಲಿಯೇ ಹೋಗಿದ್ದನ್ನು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿಯನ್ನೂ ನಡೆಸುತ್ತಿದ್ದಾರೆ. ‘ನಂಬಿಕೆ ದ್ರೋಹ ಮಾಡಿಬಿಟ್ಟಿರಿ ನೀವು’ ಎಂದು ಒತ್ತಿಒತ್ತಿ ಹೇಳುತ್ತಿದ್ದಾರೆ. ಹಾಗೇ, ಸುಶೀಲ್ ಮೋದಿ ಕೂಡ ಅದನ್ನೇ ಹೇಳಿದ್ದರು. ಉಪರಾಷ್ಟ್ರಪತಿ ಹುದ್ದೆ ಸಿಗದೆ ಇದ್ದಿದ್ದಕ್ಕೆ ಮುನಿಸಿಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: Bihar Politics | ಬಿಹಾರದಲ್ಲಿ ಸುಶೀಲ್ ಮೋದಿಯನ್ನು ಬಿಜೆಪಿ ಕಡೆಗಣಿಸಿದ್ದರ ಪರಿಣಾಮವೇ ಇದು?