Site icon Vistara News

Bihar Floor Test: ಇಂದು ನಿತೀಶ್‌ ವಿಶ್ವಾಸ ಮತ: ತೇಜಸ್ವಿ ನಿವಾಸಕ್ಕೆ ಪೊಲೀಸ್‌ ಸರ್ಪಕಾವಲು, ಆರ್‌ಜೆಡಿ ಶಾಸಕನ ಅಪಹರಣ ಆರೋಪ

election resluts 2024 nitish kumar tejaswi yadav

ಪಟನಾ: ಬಿಹಾರ ರಾಜ್ಯ ಸರ್ಕಾರದ (Bihar government) ವಿಶ್ವಾಸಮತ ಪರೀಕ್ಷೆ (Bihar Floor Test) ಇಂದು ವಿಧಾನಸಭೆಯಲ್ಲಿ ನಡೆಯಲಿದ್ದು, ದೇಶದ ಕುತೂಹಲ ಕೆರಳಿಸಿದೆ. ಈ ನಡುವೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರ ವಿರೋಧಿ ಬಣದಲ್ಲಿರುವ ತೇಜಸ್ವಿ ಯಾದವ್‌ (Tejaswi Yadav) ನಿವಾಸಕ್ಕೆ ಭಾರಿ ಪೊಲೀಸ್‌ ಸರ್ಪಕಾವಲು ಹಾಕಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ʼಮಹಾಘಟಬಂಧನ್’ನಿಂದ ಪ್ರತ್ಯೇಕಗೊಂಡು ಎನ್‌ಡಿಎಯೊಂದಿಗೆ ಸೇರಿ ಹೊಸ ಸರ್ಕಾರವನ್ನು ರಚಿಸಿದ ಬಳಿಕ ಇದೀಗ ಬಿಹಾರ ವಿಧಾನಸಭೆಯಲ್ಲಿ ನಿರ್ಣಾಯಕ ವಿಶ್ವಾಸಮತ ಪರೀಕ್ಷೆ ನಡೆಯಲಿದೆ. ವಿಶ್ವಾಸಮತದ ಮುನ್ನ, ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ಶಾಸಕರನ್ನು ಸೋಮವಾರ ಬೆಳಗ್ಗೆ ಪಾಟ್ನಾದ ಚಾಣಕ್ಯ ಹೋಟೆಲ್‌ಗೆ ಸ್ಥಳಾಂತರಿಸಿತು.

ಇದರ ನಡುವೆ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸವನ್ನು ಭಾನುವಾರ ರಾತ್ರಿಯಿಂದಲೇ ಪೊಲೀಸ್‌ ಪಡೆ ಸುತ್ತುವರೆದಿದೆ. ಆರ್‌ಜೆಡಿ ಶಾಸಕರಲ್ಲೊಬ್ಬರಾದ ಚೇತನ್ ಯಾದವ್ ಅವರನ್ನು ಅದೇ ಪಕ್ಷದವರು ʼಅಪಹರಿಸಿದ್ದಾರೆʼ ಎಂದು ಅವರ ಕುಟುಂಬ ಸದಸ್ಯರು ಆಪಾದಿಸಿದ ಬಳಿಕ ಇಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಆರ್‌ಜೆಡಿ, Xನಲ್ಲಿ ಪೋಸ್ಟ್‌ ಮಾಡಿದ ಸಂದೇಶಗಳಲ್ಲಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದೆ. “ನಿತೀಶ್‌ ಕುಮಾರ್‌ ಸರ್ಕಾರದ ಪತನದ ಭಯದಿಂದ ಪೊಲೀಸ್ ಪಡೆಯನ್ನು ಕಳುಹಿಸಿದ್ದಾರೆ. ಪೊಲೀಸ್‌ ಪಡೆ ತೇಜಸ್ವಿ ಯಾದವ್ ಅವರ ನಿವಾಸವನ್ನು ಪ್ರವೇಶಿಸಲು ಮತ್ತು ಶಾಸಕರೊಂದಿಗೆ ಘರ್ಷಣೆಗೆ ಬಯಸಿದೆ. ಬಿಹಾರದ ಜನರು ನಿತೀಶ್ ಕುಮಾರ್ ಮತ್ತು ಪೊಲೀಸರ ದುಷ್ಕೃತ್ಯಗಳನ್ನು ಗಮನಿಸುತ್ತಿದ್ದಾರೆ” ಎಂದು ಹೇಳಿದೆ.

“ನೆನಪಿಡಿ, ನಾವು ಭಯಪಡುವ ಮತ್ತು ತಲೆಬಾಗುವವರಲ್ಲ. ಇದು ಸಿದ್ಧಾಂತದ ಹೋರಾಟವಾಗಿದೆ. ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ಏಕೆಂದರೆ ನ್ಯಾಯವನ್ನು ಪ್ರೀತಿಸುವ ಬಿಹಾರದ ಜನರು ಈ ಪೊಲೀಸ್ ದಬ್ಬಾಳಿಕೆಯನ್ನು ವಿರೋಧಿಸುತ್ತಾರೆ. ಜೈ ಬಿಹಾರ! ಜೈ ಹಿಂದ್” ಎಂದು ಆರ್‌ಜೆಡಿ ಬರೆದುಕೊಂಡಿದೆ.

ಆರ್‌ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್, ವಿಶ್ವಾಸಮತ ಪರೀಕ್ಷೆಗೆ ಮುನ್ನ ಹೀಗೆ ಪೊಲೀಸ್ ಪಡೆಗಳನ್ನು ನಿಯೋಜಿಸಿರುವುದು ಸ್ವತಂತ್ರ ಭಾರತದ ಯಾವುದೇ ರಾಜ್ಯದಲ್ಲಿ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಇದು ಶಾಸಕಾಂಗ ಪಕ್ಷದ ಸಭೆ. ಬಿಜೆಪಿ ವಿಶ್ವಾಸಮತ ಪರೀಕ್ಷೆಗೆ ಮುನ್ನ ಸಭೆ ನಡೆಸಿದರೆ ಅದು ರಾಸಲೀಲೆ, ಆದರೆ ಆರ್‌ಜೆಡಿ ಮಾಡಿದರೆ ಮಾತ್ರ ಕಾನೂನುಬಾಹಿರವೇ? ಅದು ಹೇಗೆ?” ಎಂದು ಆರ್‌ಜೆಡಿ ನಾಯಕ ಹೇಳಿದ್ದಾರೆ.

ಆರ್‌ಜೆಡಿ ಶಾಸಕರ ಕುಟುಂಬದ ʼಅಪಹರಣ’ ಹೇಳಿಕೆಗಳ ಕುರಿತು ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ನಾಯಕ ಶಾನವಾಜ್ ಹುಸೇನ್ ವಾಗ್ದಾಳಿ ನಡೆಸಿದ್ದಾರೆ. “ಯಾವುದೇ ಶಾಸಕರನ್ನು ಮನೆಯಲ್ಲಿ ಕೂಡಿಹಾಕಿದರೆ ಪೊಲೀಸರು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದರು.

“ಪೊಲೀಸರು ತಮ್ಮ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ. RJD ಮತ್ತು ಕಾಂಗ್ರೆಸ್ ಗೊಂದಲವನ್ನು ಹರಡುತ್ತಿವೆ. ಜೆಡಿಯು ಮತ್ತು ಬಿಜೆಪಿ ಒಟ್ಟಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿವೆ. ಶಾಸಕರು ಎಲ್ಲರೂ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಎಲ್ಲ ಎನ್‌ಡಿಎ ಶಾಸಕರು ಒಟ್ಟಿಗೆ ಇದ್ದಾರೆ. ಅವರು ನಮ್ಮ ಶಾಸಕರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ನಾಪತ್ತೆಯಾಗಿರುವ ತಮ್ಮ ಶಾಸಕರ ಬಗ್ಗೆ ಗಮನಹರಿಸಬೇಕು” ಎಂದರು.

ನಿತೀಶ್‌ ಅವರು ಜನವರಿ 28ರಂದು ದಾಖಲೆಯ ಒಂಬತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಸ್ತುತ ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 243 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು 128 ಶಾಸಕರನ್ನು ಹೊಂದಿದೆ – 45 ಜೆಡಿ(ಯು), 79 ಬಿಜೆಪಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ (ಎಚ್‌ಎಎಂ-ಎಸ್) ಒಕ್ಕೂಟದಿಂದ ಮತ್ತು ಇನ್ನೊಬ್ಬ ಸ್ವತಂತ್ರ ಶಾಸಕ. ಏತನ್ಮಧ್ಯೆ, ‘ಮಹಾಘಟಬಂಧನ್’ ಒಟ್ಟು 115 ಶಾಸಕರನ್ನು ಹೊಂದಿದೆ. ಸರ್ಕಾರ ರಚಿಸಲು ಸದನದಲ್ಲಿ 122 ಶಾಸಕರ ಬಹುಮತದ ಅಗತ್ಯವಿದೆ.

ಇದನ್ನೂ ಓದಿ: Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ

Exit mobile version