ಬಿಹಾರದಲ್ಲಿ 10-12 ವಿದ್ಯಾರ್ಥಿನಿಯರು (Bihar Girls) ರಾಷ್ಟ್ರೀಯ ಹೆದ್ದಾರಿಯಲ್ಲಿ, ಸುಮಾರು 2 ಕಿಮೀಗಳಷ್ಟು ದೂರ ಓಡಿ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಾರದ ಪ್ರಾರಂಭದಿಂದ ಬಿಹಾರ ಬೋರ್ಡ್ ಮೆಟ್ರಿಕ್ಸ್ ಪರೀಕ್ಷೆ (10ನೇ ತರಗತಿ ಪರೀಕ್ಷೆ) ಪ್ರಾರಂಭವಾಗಿದ್ದು, ಈ ವಿದ್ಯಾರ್ಥಿನಿಯರು ಕೈಮೂರ್ನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದ ಕಾರಣ, ವಾಹನ ಸಂಚಾರ ಸಾಧ್ಯವೇ ಇರಲಿಲ್ಲ. ತಡವಾಗಿ ಹೋದರೆ, ಪರೀಕ್ಷಾ ಕೇಂದ್ರದ ಒಳಕ್ಕೆ ಬಿಡುವುದಿಲ್ಲ, ತಮಗೆ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಹೆದರಿದ ವಿದ್ಯಾರ್ಥಿನಿಯರು ಹೀಗೆ ಓಡಿ-ಓಡಿ ಪರೀಕ್ಷಾ ಕೇಂದ್ರ ತಲುಪಿದ್ದಾರೆ.
ವಿದ್ಯಾರ್ಥಿನಿಯರು ಬೆಳಗ್ಗೆ ತಮ್ಮ ಪಾಲಕರೊಂದಿಗೆ ಮನೆಯಿಂದ ಹೊರಟಿದ್ದರು. ಕೆಲವರು ಬೈಕ್ನಲ್ಲಿ, ಮತ್ತೆ ಕೆಲವರು ಆಟೋದಲ್ಲಿ ಹಾಗೂ ಮತ್ತೆ ಒಂದಷ್ಟು ಹುಡುಗಿಯರು ಕಾರಿನಲ್ಲಿ ಹೊರಟರು. ಆದರೆ ಮೊಹಾನಿಯಾ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ಗಳಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ವಿದ್ಯಾರ್ಥಿನಿಯರು ಹೊರಟಿದ್ದ ವಾಹನಗಳು ಕೂಡ ಒಂದಿಂಚೂ ಚಲಿಸಲು ಸಾಧ್ಯವಾಗದೆ ನಿಂತಿದ್ದವು. ಹೀಗೆ ನಿಂತರೆ ತಡವಾಗುತ್ತದೆ ಎಂದರಿತ ಹುಡುಗಿಯರು, ಕೈಯಲ್ಲಿ ಪೆನ್, ತಮ್ಮ ಹಾಲ್ಟಿಕೆಟ್ಗಳನ್ನು ಹಿಡಿದು, ತಾವಿದ್ದ ವಾಹನಗಳಿಂದ ಇಳಿದು ಪರೀಕ್ಷಾ ಕೇಂದ್ರದತ್ತ ಓಡಿದ್ದಾರೆ.
ಇದನ್ನೂ ಓದಿ: ಡ್ರೆಸ್ ಕಾರಣಕ್ಕೆ ಮತ್ತೆ ಸುದ್ದಿಯಾದ ನಟಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೊ ವೈರಲ್
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಗಳು ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕೈಮೂರು ಜಿಲ್ಲಾ ಶಿಕ್ಷಣಾಧಿಕಾರಿ ಸುಮನಾ ಶರ್ಮಾ, ‘ಈ ರಸ್ತೆ ಸರಿಯಿಲ್ಲ. ಇದೇ ಕಾರಣಕ್ಕೆ ವಿಪರೀತ ಎನ್ನುವಷ್ಟು ಟ್ರಾಫಿಕ್ ಜಾಮ್ ಆಗುತ್ತದೆ. ಶಾಲಾ ಮಕ್ಕಳು ಸಂಚರಿಸುವ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿ, ಟ್ರಾಫಿಕ್ ಜಾಮ್ನಿಂದ ಮುಕ್ತಿ ಕೊಡಿ, ಈ ಬಗ್ಗೆ ಆದಷ್ಟು ಬೇಗ ಗಮನ ಕೊಡಿ ಎಂದು ಅದೆಷ್ಟೋ ಸಲ ಸಾರಿಗೆ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇವೆ’ ಎಂದು ಹೇಳಿದ್ದಾರೆ.