Site icon Vistara News

Bridge Collapse: 17 ದಿನದಲ್ಲಿ 10 ಸೇತುವೆ ಕುಸಿತ; ಬಿಹಾರದಲ್ಲಿ 15 ಎಂಜಿನಿಯರ್‌ಗಳ ಅಮಾನತು!

Bridge Collapse

Bihar Government suspends 15 engineers after 10 bridges collapse in quick succession

ಪಟನಾ: ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ 10 ಸೇತುವೆಗಳು ಕುಸಿದಿರುವುದು (Bridge Collapse) ದೇಶಾದ್ಯಂತ ಸುದ್ದಿಯಾಗಿದೆ. ಸಣ್ಣ ಮಳೆಯಾದರೂ ಸೇತುವೆಗಳು ಕುಸಿಯುವುದು, ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಬಿಹಾರ ಸರ್ಕಾರದ (Bihar Government) ವಿರುದ್ಧ ಮುಗಿಬಿದ್ದಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಬಿಹಾರ ಸರ್ಕಾರವ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ.

ಬಿಹಾರದಲ್ಲಿ ಸೇತುವೆಗಳ ನಿರ್ಮಾಣದ ವೇಳೆ ಕರ್ತವ್ಯ ಲೋಪ ಎಸಗಿದ ಕಾರಣ ಸೇತುವೆಗಳು ಕುಸಿದಿವೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರವು 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಜಲ ಸಂಪನ್ಮೂಲ ಇಲಾಖೆಯ 11 ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಇನ್ನು, ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್‌ಗಳಿಂದ ವಿವರಣೆ ಕೇಳಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆಗೆ ಆದೇಶಿಸಲಾಗಿದ್ದು, ಇನ್ನಷ್ಟು ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

Bridge Collapse

ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜುಲೈ 3ರಂದು ಸಿವಾನ್‌ ಜಿಲ್ಲೆಯಲ್ಲಿ 2 ಸೇತುವೆ ಬಿದ್ದಿದ್ದವು. ಇನ್ನು, ಜುಲೈ 4ರಂದು ಸರಣ್‌ ಜಿಲ್ಲೆಯಲ್ಲಿ ಒಂದು ಸೇತುವೆ ಕುಸಿದಿತ್ತು. ಜೂನ್‌ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್‌ 27ರಂದು ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್‌ 23ರಂದು ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್‌ 22ರಂದು ಕೂಡ ಸಿವಾನ್‌ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್‌ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.  

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Exit mobile version