ನವ ದೆಹಲಿ: ಬಿಹಾರದಲ್ಲಿ ಆಗಸ್ಟ್ 16ರಂದು ಮಹಾ ಘಟ್ ಬಂಧನ್ ಸರ್ಕಾರದ ಸಂಪುಟ ರಚನೆಯಾಗಿದ್ದು, ಜೆಡಿಯು ಪಕ್ಷದ 11, ಆರ್ಜೆಡಿಯ 16, ಕಾಂಗ್ರೆಸ್ನ ಇಬ್ಬರು ಶಾಸಕರು, ಎಚ್ಎಎಂನ ಒಬ್ಬ ಮತ್ತು ಒಬ್ಬ ಸ್ವತಂತ್ರ ಶಾಸಕ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೇ, ಖಾತೆ ಹಂಚಿಕೆಯೂ ಆಗಿದೆ. ಅದರಲ್ಲೀಗ ಕಾನೂನು ಇಲಾಖೆಯನ್ನು ಯಾವ ಸಚಿವನಿಗೆ ಕೊಡಲಾಗಿತ್ತೋ, ಅವರೇ ಜೈಲುಪಾಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಆರ್ಜೆಡಿ ಸಚಿವ ಕಾರ್ತಿಕೇಯ ಸಿಂಗ್ ವಿರುದ್ಧ ಒಂದು ಕಿಡ್ನ್ಯಾಪ್ ಕೇಸ್ ದೇಖಲಾಗಿದ್ದು, ಆಗಸ್ಟ್ 16ಕ್ಕೆ ಕೋರ್ಟ್ಗೆ ಬಂದು ಶರಣಾಗುವಂತೆ ವಾರೆಂಟ್ ನೀಡಲಾಗಿತ್ತು. ಆದರೆ ಅವರು ಕೋರ್ಟ್ಗೆ ಹೋಗದೆ, ಇತ್ತ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಕಾರ್ತಿಕೇಯ ವಿರುದ್ಧ ಅಪಹರಣ ಕೇಸ್ ಇರುವುದಾಗಲೀ, ಅವರಿಗೆ ವಾರೆಂಟ್ ಜಾರಿಯಾಗಿದ್ದಾಗಲೀ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಗೊತ್ತೇ ಇಲ್ಲ.
ಕಾರ್ತಿಕೇಯ ಸಿಂಗ್ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಗಿದ್ದು 2014ರಲ್ಲಿ. ರಾಜೀವ್ ರಂಜನ್ ಎಂಬ ಬಿಲ್ಡರ್ನನ್ನು ಅಪಹರಿಸಿದ ಆರೋಪದಡಿ ಒಟ್ಟು 11 ಮಂದಿ ವಿರುದ್ಧ ಪಟನಾದ ಬಿಹ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ಕೇಸ್ಗೆ ಸಂಬಂಧಪಟ್ಟ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ತನ್ನ ಮೇಲಿನ ಆರೋಪ ಸುಳ್ಳು ಎಂದೇ ಕಾರ್ತಿಕೇಯ ಸಿಂಗ್ ಹೇಳುತ್ತ ಬಂದಿದ್ದರೂ, ಆಗಸ್ಟ್ 16ರೊಳಗೆ ಕೋರ್ಟ್ಗಾಗಲೀ, ಪೊಲೀಸ್ ಠಾಣೆಗಾಗಲೀ ಬಂದು ಶರಣಾಗಬೇಕು ಎಂದು ವಾರೆಂಟ್ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕಾರ್ತೀಕ್ ಈ ಕೇಸ್ನಲ್ಲಿ ಆರೋಪಿಯಲ್ಲ ಎಂದೇ ಅವರ ಪರ ವಕೀಲರೂ ವಾದಿಸುತ್ತಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಿತೀಶ್ ಕುಮಾರ್ ನನಗೇನೂ ಗೊತ್ತಿಲ್ಲ ಎಂದೇ ವಾದಿಸಿದ್ದಾರೆ.
ಶೇ.72 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್
ಇದೀಗ ರಚನೆಯಾಗಿರುವ ಮಹಾ ಘಟ್ ಬಂಧನ್ ಸರ್ಕಾರದಲ್ಲಿನ ಶೇ. 72ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ಇರುವುದು ದೃಢಪಟ್ಟಿದೆ. ಅಂದರೆ ಸಂಪುಟ ಸೇರಿದ 31 ಸಚಿವರಲ್ಲಿ 27 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ.ಅದರಲ್ಲೂ 17 ಮಂದಿ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಕೇಸ್ ಇದೆ ಎನ್ನಲಾಗಿದೆ. ಅದರಲ್ಲೂ ಆರ್ಜೆಡಿಯ 15 ಸಚಿವರ ವಿರುದ್ಧವೂ ಒಂದಲ್ಲ ಒಂದು ಕೇಸ್ ಇದ್ದು 11 ಸಚಿವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣವಿದೆ. ಹಾಗೇ, ಜೆಡಿಯುದ 11 ಸಚಿವರಲ್ಲಿ ನಾಲ್ವರು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಇರುವುದನ್ನು ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ: Bihar Politics | ಜೆಡಿಯು ಬಿಟ್ಟು ಹೋದ ಮೇಲೆ ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಿತಿಯೇನು?