Site icon Vistara News

Manjhi 2.0 | 1,500 ಅಡಿ ಎತ್ತರದ ಬೆಟ್ಟದ ಮೇಲಿನ ದೇಗುಲಕ್ಕೆ 8 ವರ್ಷ ಶ್ರಮಿಸಿ 400 ಮೆಟ್ಟಿಲು ಕೊರೆದ ಪರಮ ಭಕ್ತ!

Ganouri Paswan Manjhi

ಪಟನಾ: ಬಿಹಾರದಲ್ಲಿ ಪತ್ನಿಯ ನೆನಪಿಗಾಗಿ ಬೆಟ್ಟವನ್ನೇ ಕೊರೆದು ದಾರಿ ಮಾಡಿದ ದಶರಥ ಮಾಂಝಿ ಕತೆ ಎಲ್ಲರಿಗೂ ಗೊತ್ತಿದೆ. ಇದೇ ಬಿಹಾರದಲ್ಲಿ, ಇದೇ ದಶರಥ ಮಾಂಝಿಯ ರೀತಿಯೇ ಮತ್ತೊಬ್ಬ ವ್ಯಕ್ತಿಯು (Manjhi 2.0) ಬೆಟ್ಟದ ಮೇಲಿನ ದೇವಾಲಯಕ್ಕೆ ಎಂಟು ವರ್ಷ ಶ್ರಮಿಸಿ, ೪೦೦ ಮೆಟ್ಟಿಲು ಕೊರೆದಿದ್ದಾರೆ. ಆ ಮೂಲಕ ಇವರು ಬಿಹಾರದ ಎರಡನೇ ಮಾಂಝಿ ಎಂದೇ ಖ್ಯಾತಿಯಾಗಿದ್ದಾರೆ.

ಜೆಹಾನಾಬಾದ್‌ ಪಟ್ಟಣದ ಜಾರು ಬನ್ವಾರಿಯಾ ಗ್ರಾಮದ ಬೆಟ್ಟದ ಮೇಲೆ ಬಾಬಾ ಯೋಗೇಶ್ವರ ನಾಥ್‌ ದೇವಾಲಯವಿದ್ದು, ಶಿವನ ದರ್ಶನ ಮಾಡುವುದು ತುಂಬ ಕಷ್ಟವಾಗಿತ್ತು. ಪ್ರತಿದಿನ ಭಕ್ತರು ದೇವರ ದರ್ಶನ ಮಾಡಲು ಕಷ್ಟಪಡುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಗನೌರಿ ಪಾಸ್ವಾನ್‌ (Ganauri Paswan) ಎಂಬ ಶಿವನ ಪರಮ ಭಕ್ತನು ೧,೫೦೦ ಅಡಿ ಎತ್ತರದ ಮೇಲಿನ ದೇವಾಲಯಕ್ಕೆ ಎಂಟು ವರ್ಷ ಶ್ರಮಿಸಿ ೪೦೦ ಮೆಟ್ಟಿಲು ಕೊರೆದಿದ್ದಾರೆ.

ಪಾಸ್ವಾನ್‌ ಅವರು ಮೊದಲು ಟ್ರಕ್‌ ಡ್ರೈವರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದಾದ ಬಳಿಕ ಅವರು ಕಲ್ಲಿನ ಕ್ವಾರಿ ಕೆಲಸದಲ್ಲಿ ತೊಡಗಿದ್ದರು. ಶಿವನ ಭಕ್ತರಾದ ಇವರು ಜನರ ಕಷ್ಟ ಅರಿತು ಬೆಟ್ಟದ ಬಂಡೆಗಳನ್ನೇ ಮೆಟ್ಟಿಲುಗಳನ್ನಾಗಿ ಕೆತ್ತುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ನೆರವೂ ಇತ್ತು ಎಂದು ತಿಳಿದುಬಂದಿದೆ.

“ಕಲ್ಲುಗಳ ಮಧ್ಯೆ ದೇವಾಲಯಕ್ಕೆ ತೆರಳಲು ಜನರಿಗೆ ಎಂಟು ತಾಸು ಬೇಕಾಗುತ್ತಿತ್ತು. ನನ್ನ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಹಾಯದಿಂದ ಮೆಟ್ಟಿಲು ಕೊರೆದಿದ್ದು, ಈಗ ತುಂಬ ಸಮಯ ಉಳಿಯುತ್ತದೆ. ಹಾಗೆಯೇ, ಭಕ್ತರು ಹೆಚ್ಚು ಶ್ರಮ ವಹಿಸುವುದೂ ತಪ್ಪುತ್ತಿದೆ. ಶಿವನಿಗೆ ನಾನು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮಾಡಿದ ಸಣ್ಣ ಸೇವೆ ಇದಾಗಿದೆ” ಎಂದು ಗನೌರಿ ಪಾಸ್ವಾನ್‌ ಹೇಳಿದ್ದಾರೆ.

ಇದನ್ನೂ ಓದಿ | Viral Video | ಉಚಿತ ಹೆಲ್ಮೆಟ್‌ಗಾಗಿ ಮುಗಿಬಿದ್ದ ಜನ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌

Exit mobile version