Site icon Vistara News

Bihar Politics | ಮಹಾ ಘಟ್​ ಬಂಧನ್​ ಸರ್ಕಾರದ ಮೊದಲ ವಿಕೆಟ್​ ಪತನ; ಕಾನೂನು ಸಚಿವ ರಾಜೀನಾಮೆ

Bihar minister Kartik Kumar resigns

ಪಟನಾ: ಬಿಹಾರ ಮಹಾ ಘಟ್​ ಬಂಧನ್​ ಸರ್ಕಾರದ ಮೊದಲನೇ ವಿಕೆಟ್​ ಪತನವಾಗಿದೆ. ಇಲ್ಲಿನ ಕಾನೂನು ಸಚಿವರಾಗಿದ್ದ, ಆರ್​ಜೆಡಿ ನಾಯಕ ಕಾರ್ತೀಕ್​ ​​ಕುಮಾರ್ (ಕಾರ್ತಿಕೇಯ ಸಿಂಗ್​)​​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ​ ವಿರುದ್ಧ ಕಿಡ್ನ್ಯಾಪ್​ ಕೇಸ್​ ದಾಖಲಾಗಿತ್ತು. ಆಗಸ್ಟ್​ 16ರಂದು ಕೋರ್ಟ್​ಗೆ ಬಂದು ಶರಣಾಗುವಂತೆ ಅವರಿಗೆ ಸಮನ್ಸ್​ ನೀಡಲಾಗಿತ್ತು. ಆದರೆ ಕಾರ್ತೀಕ್​ ಕುಮಾರ್ ಕೋರ್ಟ್​ಗೆ ಹೋಗದೆ, ಇತ್ತ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಇಂಥ ಕ್ರಿಮಿನಲ್​ ಕೇಸ್​ ಹೊತ್ತಿರುವ ಸಚಿವನಿಗೇ ಕಾನೂನು ಇಲಾಖೆಯನ್ನು ನೀಡಲಾಗಿತ್ತು. ಇದನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದಲ್ಲದೆ, ಬಿಹಾರದಲ್ಲಿ ಮಹಾ ಘಟ್​ ಬಂಧನ್​ ಸರ್ಕಾರದ ಮೈತ್ರಿ ಪಕ್ಷವಾದ ಸಿಪಿಐಎಂಎಲ್​ (Communist Party of India (Marxist-Leninist) Liberation) ಪಕ್ಷದ ಮುಖಂಡರೂ ಕೂಡ ಆಕ್ಷೇಪ ಎತ್ತಿದ್ದರು. ಕಾರ್ತೀಕ್​ ​ಕುಮಾರ್​ರನ್ನು ಕಾನೂನು ಸಚಿವನಾಗಿ ನೇಮಕ ಮಾಡಿದ್ದನ್ನು, ಇನ್ನೊಮ್ಮೆ ಪರಿಶೀಲನೆ ಮಾಡಿ ಎಂದು ನಿತೀಶ್​ ಕುಮಾರ್​ ಮತ್ತು ತೇಜಸ್ವಿ ಯಾದವ್​ಗೆ ಒತ್ತಾಯಿಸಿದ್ದರು. ಹೀಗೆ ವಿರೋಧ ಹೆಚ್ಚಾದ ಬೆನ್ನಲ್ಲೇ ಕಾರ್ತೀಕ್​ ಕುಮಾರ್​ ಇಲಾಖೆಯನ್ನು ಬದಲು ಮಾಡಲಾಗಿತ್ತು. ಕಾನೂನು ಇಲಾಖೆ ವಾಪಸ್​ ಪಡೆದು, ಸಕ್ಕರೆ ಉದ್ಯಮ ಇಲಾಖೆ ಕೊಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಕಾರ್ತೀಕ್​​ ಕುಮಾರ್​ ರಾಜೀನಾಮೆ ಕೊಟ್ಟಿದ್ದಾರೆ. ಅವರ​ ರಾಜೀನಾಮೆಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಅದನ್ನು ರಾಜ್ಯಪಾಲರಿಗೆ ಕಳಿಸಿಕೊಟ್ಟಿದ್ದಾರೆ.

ಕಾರ್ತೀಕ್ ಕುಮಾರ್​ ವಿರುದ್ಧ ಕಿಡ್ನ್ಯಾಪ್​ ಕೇಸ್​ ದಾಖಲಾಗಿದ್ದು 2014ರಲ್ಲಿ. ರಾಜೀವ್ ರಂಜನ್​ ಎಂಬ ಬಿಲ್ಡರ್​​ನನ್ನು ಅಪಹರಿಸಿದ ಆರೋಪದಡಿ ಒಟ್ಟು 11 ಮಂದಿ ವಿರುದ್ಧ ಪಟನಾದ ಬಿಹ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ಕೇಸ್​​ಗೆ ಸಂಬಂಧಪಟ್ಟ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ತನ್ನ ಮೇಲಿನ ಆರೋಪ ಸುಳ್ಳು ಎಂದೇ ಕಾರ್ತೀಕ್​ ಕುಮಾರ್​​ ಹೇಳುತ್ತ ಬಂದಿದ್ದರೂ, ಆಗಸ್ಟ್​ 16ರೊಳಗೆ ಕೋರ್ಟ್​ಗಾಗಲೀ, ಪೊಲೀಸ್ ಠಾಣೆಗಾಗಲೀ ಬಂದು ಶರಣಾಗಬೇಕು ಎಂದು ವಾರೆಂಟ್​ನಲ್ಲಿ ಉಲ್ಲೇಖಿಸಲಾಗಿತ್ತು.

ಕಾರ್ತೀಕ್​ ಕುಮಾರ್​ ರಾಜೀನಾಮೆ ನೀಡುತ್ತಿದ್ದಂತೆ, ಬಿಜೆಪಿಯ ಸುಶೀಲ್​ ಮೋದಿ ಟ್ವೀಟ್​ ಮಾಡಿ, ‘ಮೊದಲ ವಿಕೆಟ್​ ಪತನಾಗಿದೆ. ಹೀಗೆ ನೋಡುತ್ತಿರಿ, ಇನ್ನಷ್ಟು ವಿಕೆಟ್​ಗಳು ಹೋಗುತ್ತಿರುತ್ತವೆ’ ಎಂದು ಹೇಳಿದ್ದಾರೆ. ಮಹಾ ಘಟ್​ ಬಂಧನ್​ ಸರ್ಕಾರದಲ್ಲಿನ ಶೇ. 72ರಷ್ಟು ಸಚಿವರ ವಿರುದ್ಧ ಕ್ರಿಮಿನಲ್​ ಕೇಸ್​ ಇರುವುದು ದೃಢಪಟ್ಟಿದೆ. ಅಂದರೆ ಸಂಪುಟ ಸೇರಿದ 31 ಸಚಿವರಲ್ಲಿ 27 ಮಂದಿ ತಮ್ಮ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ. ಹೀಗಾಗಿ ಒಂದೊಂದೇ ಕೇಸ್​ಗಳು ಮುನ್ನೆಲೆಗೆ ಬಂದರೆ ನಿಶ್ಚಿತವಾಗಿಯೂ ಮಹಾ ಘಟ್ ಬಂಧನ್​ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ.

ಇದನ್ನೂ ಓದಿ: ಆಕೆಯನ್ನು ತೆಗೆಯದೆ ಇದ್ದರೆ ನಾನು ರಾಜೀನಾಮೆ ಕೊಡುತ್ತೇನೆ; ಮಹಾ ಘಟ್​ ಬಂಧನ್​ದಲ್ಲಿ ಜಗಳ !

Exit mobile version