ಪಟನಾ: ರಾಜ್ಯಪಾಲರನ್ನು ಭೇಟಿಯಾಗಿ ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ‘ನನಗೆ ಏಳು ಪಕ್ಷಗಳಿಂದ 164 ಶಾಸಕರ ಬೆಂಬಲವಿದೆ’ ಎಂದು ನಿತೀಶ್ ಕುಮಾರ್ ಹೇಳಿದರು. ಹಾಗೇ, ‘ನಾನು ಎನ್ಡಿಎ ಒಕ್ಕೂಟ ಬಿಡಲು ಖಂಡಿತ ಕಾರಣಗಳು ಇವೆ. ಬಿಹಾರವನ್ನು ರಕ್ಷಣೆ ಮಾಡುವುದೇ ನಮ್ಮ ಮೂಲ ಧ್ಯೇಯ. ಆದರೆ ಎನ್ಡಿಎ ಸಮಾಜವನ್ನು ವಿಭಜಿಸುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ನಾನು ಎಂದಿಗೂ ರಾಜಿಯಾಗುವುದಿಲ್ಲ. ಮಹಾ ಘಟ್ ಬಂಧನ್ದಲ್ಲಿ ನಾವೆಲ್ಲ ಸದಾ ಒಗ್ಗಟ್ಟಾಗಿರುತ್ತೇವೆ’ ಎಂದು ಹೇಳಿದ್ದಾರೆ.
ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮಾತನಾಡಿ, ‘ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನೆಲ್ಲ ನೆಲಸಮ ಮಾಡುತ್ತದೆ ಎಂದು ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು. ಬಿಜೆಪಿಗೆ ಬೆದರಿಕೆ ಹಾಕುವುದು ಮತ್ತು ಜನರನ್ನು ಖರೀದಿಸುವುದು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಬಿಜೆಪಿಯ ಈ ಅಜೆಂಡಾ ಬಿಹಾರದಲ್ಲಿ ಅನುಷ್ಠಾನಕ್ಕೆ ಬರಲು ಬಿಡಬಾರದು ಎಂಬುದೇ ನಮ್ಮೆಲ್ಲರ ಆಶಯವಾಗಿತ್ತು. 1990ರಲ್ಲಿ ಅಡ್ವಾಣಿಯವರ ರಾಮ ರಥಯಾತ್ರೆಯನ್ನು ಬಿಹಾರದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ನಿಲ್ಲಿಸಿದ್ದನ್ನು ದೇಶವೇ ನೋಡಿದೆ. ನಮ್ಮ ಆ ಪಟ್ಟನ್ನು ಎಂದಿಗೂ ಸಡಿಲಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಹೊರತು ಪಡಿಸಿ ಉಳಿದೆಲ್ಲ ಪಕ್ಷಗಳೂ ನಿತೀಶ್ ಕುಮಾರ್ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ನಿತೀಶ್ ಕುಮಾರ್ ಅವರೇ ತಮ್ಮ ನಾಯಕ ಎಂದು ಒಪ್ಪಿಕೊಂಡಿವೆ. ಉತ್ತರ ಭಾರತದಲ್ಲಿ ಬಿಜೆಪಿಗೆ ಯಾವ ಪಕ್ಷವೂ ಸ್ನೇಹಿತನಾಗಿ ಉಳಿದಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಉದ್ವಿಗ್ನತೆ ಸೃಷ್ಟಿಸಿದೆ. ಬಿಜೆಪಿಗೆ ಒಂದು ಕೆಟ್ಟ ಇತಿಹಾಸವಿದೆ. ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳನ್ನು ಯಾವುದನ್ನೂ ಅದು ಉಳಿಸುವುದಿಲ್ಲ. ಅದಕ್ಕೆ ಉದಾಹರಣೆ ಪಂಜಾಬ್ ಮತ್ತು ಮಹಾರಾಷ್ಟ್ರ ಎಂದೂ ತೇಜಸ್ವಿ ಯಾದವ್ ಕಿಡಿಕಾರಿದರು.
ತೇಜ್ ಪ್ರತಾಪ್ ಯಾದವ್ ಫುಲ್ ಖುಷ್ !
ಲಾಲೂ ಪ್ರಸಾದ್ ಯಾದವ್ರ ಇನ್ನೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಬಿಹಾರದಲ್ಲಾದ ಬೆಳವಣಿಗೆ ಬಗ್ಗೆ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ‘ಶೀಘ್ರವೇ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುತ್ತದೆ. ನಾನು ಈ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅದರಲ್ಲೂ ಯುವಕರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿಯಿಂದ ಬಿಹಾರದಲ್ಲಿ ಮತ್ತೆ ಮಹಾ ಘಟ್ ಬಂಧನ್ ಆಡಳಿತ ಬರುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bihar Politics | ಬಿಹಾರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮಹಾ ಘಟ್ ಬಂಧನ್ 2.0