ಪಾಟ್ನಾ: ನಮ್ಮ ರಾಷ್ಟ್ರಗೀತೆ ʼಜನ ಗಣ ಮನʼಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ʼವಂದೇ ಮಾತರಂʼ ಗೀತೆಗೂ ಇದೆ. ಇದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಕೊಟ್ಟ ಗೀತೆ ಎಂದೇ ಹೇಳಲಾಗುತ್ತದೆ. ಇವತ್ತಿಗೂ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ಆಚರಣೆ, ಲೋಕಸಭೆ, ವಿಧಾನಸಭೆಗಳಲ್ಲೂ ರಾಷ್ಟ್ರಗೀತೆಯೊಂದಿಗೆ ಇದನ್ನೂ ಹಾಡಲಾಗುತ್ತದೆ. ರಾಷ್ಟ್ರಗೀತೆಯನ್ನು ಹಾಡುವಾಗ ಹೇಗೆ ಎಲ್ಲರೂ ಎದ್ದುನಿಂತು ಗೌರವ ಅರ್ಪಿಸುತ್ತಾರೋ, ವಂದೇ ಮಾತರಂ ಹಾಡುವಾಗಲೂ ಪ್ರತಿಯೊಬ್ಬರೂ ಎದ್ದುನಿಲ್ಲುವುದು ಪದ್ಧತಿ. ಆದರೆ ಬಿಹಾರ ವಿಧಾನಸಭೆಯಲ್ಲಿ ಶಾಸಕರೊಬ್ಬರು ವಂದೇ ಮಾತರಂ ಹಾಡುವಾಗ ನಾನು ಎದ್ದು ನಿಲ್ಲುವುದಿಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಜೂ.30ರಂದು ಬಿಹಾರ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದ ಕೊನೇ ದಿನವಾಗಿತ್ತು. ಈ ವೇಳೆ ರಾಷ್ಟ್ರಗೀತೆ ಜನಗಣ ಮನ ಹಾಡಲಾಯಿತು. ಆಗ ಪ್ರತಿಯೊಬ್ಬರೂ ಎದ್ದುನಿಂತರು. ಅದಾದ ಬಳಿಕ ವಂದೇ ಮಾತರಂ ಗೀತೆ ಗಾಯನದ ಹೊತ್ತಲ್ಲಿ ಆರ್‌ಜೆಡಿ ಶಾಸಕ ಸೌದ್ ಆಲಂ ಎದ್ದು ನಿಲ್ಲಲು ನಿರಾಕರಿಸಿ, ಕುಳಿತುಕೊಂಡರು. ವಿಧಾನಸಭೆಯಿಂದ ಹೊರಬಂದ ಬಳಿಕ ಅದಕ್ಕೆ ಸ್ಪಷ್ಟನೆ ಕೊಟ್ಟ ಸೌದ್, ʼವಂದೇ ಮಾತರಂ ಎಂಬುದು ಹಿಂದೂ ಧರ್ಮದ ಗೀತೆಯೇ ಹೊರತು ರಾಷ್ಟ್ರಗೀತೆಯಲ್ಲ. ಹಾಗಾಗಿ ನಾನದಕ್ಕೆ ಎದ್ದುನಿಂತು ಗೌರವ ಕೊಡಬೇಕು ಎಂದೇನೂ ಇಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಹಿಂದೂ ರಾಷ್ಟ್ರವಲ್ಲʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ: ಜೈ ಎಂದ ನಿತೀಶ್, ತೇಜಸ್ವಿ ಬೇಡಿಕೆಗೆ ಅಸ್ತು, ಮಿತ್ರಪಕ್ಷ ಬಿಜೆಪಿಗೆ ಮುಜುಗರ
ಸೌದ್ ಅಲಂ ನಡೆಯನ್ನು ಖಂಡಿಸಿದ ಬಿಜೆಪಿ ಶಾಸಕ ಸಂಜಯ್ ಕುಮಾರ್ ಸಿಂಗ್, ʼಇಂಥ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆರ್‌ಜೆಡಿ ಶಾಸಕರು ವಂದೇ ಮಾತರಂ ಗೀತೆಗೆ ಅಗೌರವ ತೋರುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಇಂಥವರು ಶಾಸಕಾಂಗದಲ್ಲಿ ಇರುವ ಅಗತ್ಯವೇ ಇಲ್ಲʼ ಎಂದಿದ್ದಾರೆ.
ಹಿಂದೊಮ್ಮೆ ಆರ್‌ಜೆಡಿ ನಾಯಕ ಅಬ್ದುಲ್ ಬಾರಿ ಸಿದ್ಧಿಕಿ ಕೂಡ ವಂದೇ ಮಾತರಂ ಗೀತೆ ಹಾಡುವಾಗ ಎದ್ದು ನಿಲ್ಲಲು ನಿರಾಕರಿಸಿದ್ದರು. ಇದರಲ್ಲಿ ಮಾತೃಭೂಮಿಗೆ ವಂದಿಸುತ್ತೇವೆ ಎಂಬ ಸಾಲಿದೆ. ನಮ್ಮ ಏಕೈಕ ದೇವರಾದ ಅಲ್ಲಾನಿಗೆ ಬಿಟ್ಟು ನಾವು ಇನ್ಯಾರಿಗೂ ನಮಿಸುವುದಿಲ್ಲ ಎಂದಿದ್ದರು. 2013ರಲ್ಲಿ ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷದ ಸಂಸದ ಶಾಫಿಖುರ್ ರಹ್ಮಾನ್ ಬರ್ಖ್ ಲೋಕಸಭೆಯಲ್ಲಿ ಹೀಗೆ ಮಾಡಿದ್ದರು. ಆಗ ಶಾಫಿಖುರ್ ರಹ್ಮಾನ್ ಬರ್ಖ್ ನಡೆಯನ್ನು ಇತರ ಮುಸ್ಲಿಂ ಸಂಸದರೂ ಇದನ್ನು ಖಂಡಿಸಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ʻಮಮತಾʼ ಸಭೆಗೆ ಸರ್ವ ಸಜ್ಜು; ಬರಲ್ಲ ಎಂದ ಟಿಆರ್‌ಎಸ್, ಆಪ್, ಬಿಜೆಡಿ