ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಖ್ಯಾತ ಉದ್ಯಮಿ, ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರು ರೊಟ್ಟಿ (Bill Gates Makes Roti) ತಯಾರಿಸಿದ್ದಾರೆ. ಅದೂ ಕೂಡ ಭಾರತದಲ್ಲಿ ತಯಾರಿಸುವಂತೆ ಹಿಟ್ಟು ಮಿಶ್ರಣ ಮಾಡಿ, ಅದನ್ನು ಲಟ್ಟಣಿಗೆಯಿಂದ ಲಟ್ಟಿಸಿ ಬೇಯಿಸಿ, ಮೇಲಿಂದ ತುಪ್ಪ ಸವರಿದ್ದಾರೆ. ಹೀಗೆ, ಬಿಲ್ ಗೇಟ್ಸ್ ಅವರು ರೊಟ್ಟಿ ಮಾಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿಕೊಂಡಿದ್ದು, ಮುಂದಿನ ಸಲ ಸಿರಿಧಾನ್ಯಗಳ ಹಿಟ್ಟಿನಿಂದ ರೊಟ್ಟಿ ತಯಾರಿಸಿ ಎಂಬುದಾಗಿ ಸಲಹೆಯನ್ನೂ ನೀಡಿದ್ದಾರೆ.
“ಭಾರತದಲ್ಲೀಗ ಸಿರಿಧಾನ್ಯಗಳ ರೊಟ್ಟಿ ಮಾಡುವ ಟ್ರೆಂಡ್ ಶುರುವಾಗಿದೆ. ಸಿರಿಧಾನ್ಯಗಳ ರೊಟ್ಟಿಗೆ ಭಾರತ ಖ್ಯಾತಿ ಹೊಂದಿದ್ದು, ಇದು ಆರೋಗ್ಯಕ್ಕೂ ಅನುಕೂಲ. ಹಾಗಾಗಿ, ಮುಂದಿನ ಸಲ ಸಿರಿಧಾನ್ಯಗಳ ರೊಟ್ಟಿ ತಯಾರಿಸಿ” ಎಂದು ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ ಗೇಟ್ಸ್ ವಿಡಿಯೊ ಶೇರ್ ಮಾಡಿದ್ದಾರೆ.
ಬಿಲ್ ಗೇಟ್ಸ್ ಅವರು ರೊಟ್ಟಿ ಮಾಡಿದ ವಿಡಿಯೊವನ್ನು ಅಮೆರಿಕದ ಪ್ರಸಿದ್ಧ ಬಾಣಸಿಗ, ಜನಪ್ರಿಯ ಬ್ಲಾಗರ್ ಆಗಿರುವ ಐಟಾನ್ ಬರ್ನಾಥ್ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಿಲ್ಗೇಟ್ಸ್-ಐಟಾನ್ ಜತೆಯಾಗಿಯೇ ರೊಟ್ಟಿ ಮಾಡಿದ್ದನ್ನು ವಿಡಿಯೊದಲ್ಲಿ ನೋಡಬಹುದು. ‘ಬಿಲ್ ಗೇಟ್ಸ್ ಮತ್ತು ನಾನು ಒಟ್ಟಾಗಿ ಭಾರತದ ರೊಟ್ಟಿ ಮಾಡಿದ್ದೇವೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ, ‘ನಾನು ಇತ್ತೀಚೆಗೆ ಭಾರತದ ಬಿಹಾರಕ್ಕೆ ಹೋಗಿ ಬಂದೆ. ಅಲ್ಲಿ ಹೊಸ ಬಿತ್ತನೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗೋಧಿ ಬೆಳೆದು, ಅಧಿಕ ಇಳುವರಿ ಪಡೆಯುತ್ತಿರುವ ರೈತರನ್ನು ಭೇಟಿ ಮಾಡಿದೆ. ಹಾಗೇ, ರೊಟ್ಟಿ ಮಾಡುವುದರಲ್ಲಿ ಪಳಗಿರುವ ‘Didi Ki Rasoi’ ಕ್ಯಾಂಟೀನ್ಗಳ ಮಹಿಳೆಯರನ್ನೂ ಭೇಟಿ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ರೊಟ್ಟಿ ಮಾಡಿದ ಬಿಲ್ ಗೇಟ್ಸ್; ಲಟ್ಟಣಿಗೆಯಿಂದ ಲಟ್ಟಿಸಿದ ರೊಟ್ಟಿಗೆ ಆಕಾರವೇ ಬರಲಿಲ್ಲ!