Site icon Vistara News

ಜಾತಿ ಆಧಾರಿತ ಮೀಸಲಾತಿ 65%ಕ್ಕೆ ಹೆಚ್ಚಿಸಲು ಬಿಹಾರ ಅಸ್ತು; ಮತ್ತೊಂದು ಐತಿಹಾಸಿಕ ತೀರ್ಮಾನ

Nitish Kumar

JD(U) president Nitish Kumar Resigns; Good Bye To RJD, Will Take Oath As CM At 5PM Today

ಪಟನಾ: ಲೋಕಸಭೆ ಚುನಾವಣೆಗೂ ಮುನ್ನ ಜಾತಿ ಗಣತಿಯ (Caste Census) ವರದಿ ಬಿಡುಗಡೆ ಮಾಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರವೀಗ ಮತ್ತೊಂದು ಐತಿಹಾಸಿಕ ತೀರ್ಮಾನ ಪ್ರಕಟಿಸಿದೆ. ರಾಜ್ಯದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು (Caste Reservation) ಶೇ.65ಕ್ಕೆ ಹೆಚ್ಚಿಸುವ ಮಹತ್ವದ ವಿಧೇಯಕಕ್ಕೆ ಬಿಹಾರ ವಿಧಾನಸಭೆಯು ಅವಿರೋಧವಾಗಿ ಅಂಗೀಕಾರ ನೀಡಿದೆ. ಹಾಗಾಗಿ, ಮುಂಬರುವ ಲೋಕಸಭೆ ಹಾಗೂ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪ್ರಮುಖವಾಗಿದೆ.

ಜಾತಿಗಣತಿ ಆಧಾರದ ಮೇಲೆ ಎಸ್‌ಸಿ, ಎಸ್‌ಟಿ, ಒಬಿಸಿ, ಅತ್ಯಂತ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯನ್ನು ಶೇ.65ಕ್ಕೆ ಏರಿಕೆ ಮಾಡುವುದು ಬಿಹಾರ ಸರ್ಕಾರದ ಉದ್ದೇಶವಾಗಿದೆ. ಹಾಗೆಯೇ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) ಶೇ.10ರಷ್ಟು ಮೀಸಲಾತಿ ನೀಡುವುದನ್ನು ಕೂಡ ನೂತನ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಆ ಮೂಲಕ ಈಗ ಇರುವ ಶೇ.50ರಷ್ಟು ಮೀಸಲಾತಿಯನ್ನು ಶೇ.75ಕ್ಕೆ ಏರಿಕೆ ಮಾಡುವುದು ಬಿಹಾರ ಸರ್ಕಾರದ ಉದ್ದೇಶವಾಗಿದೆ. ನೂತನ ವಿಧೇಯಕವು ಕಾಯ್ದೆಯಾಗಿ ಜಾರಿಯಾದರೆ ಎಸ್‌ಸಿ ಸಮುದಾಯದವರಿಗೆ ಶೇ.20ರಷ್ಟು, ಎಸ್‌ಟಿ ಶೇ.2, ಒಬಿಸಿ ಶೇ.18 ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಶೇ.25ರಷ್ಟು ಮೀಸಲಾತಿ ದೊರೆಯಲಿದೆ.

ಬಿಹಾರದಲ್ಲಿರುವ ಒಟ್ಟು 13.07 ಕೋಟಿ ಜನಸಂಖ್ಯೆಯಲ್ಲಿ ಶೇ.63ರಷ್ಟು ಜನ ಇತರೆ ಹಿಂದುಳಿದ ವರ್ಗಗಳು (OBC) ಹಾಗೂ ಅತ್ಯಂತ ಹಿಂದುಳಿದ ವರ್ಗಗಳ ಉಪ ಪಂಗಡಗಳ ಜನರೇ ಇರುವ ಕಾರಣ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಆದಾಗ್ಯೂ, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಯಾವುದೇ ರಾಜ್ಯದ ಮೀಸಲಾತಿ ಪ್ರಮಾಣವು ಶೇ.50ಕ್ಕಿಂತ ಜಾಸ್ತಿ ಇರಬಾರದು. ಈ ಕಾನೂನು ತೊಡಕನ್ನು ಬಿಹಾರ ಸರ್ಕಾರ ಹೇಗೆ ನಿವಾರಿಸಿಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Bihar Caste Census: ಬಿಹಾರದ ಶೇ.34 ಕುಟುಂಬಗಳ ಆದಾಯ 6000 ರೂ.ಗಿಂತ ಕಡಿಮೆ!

ಜಾತಿಗಣತಿಯ ಪ್ರಮುಖ ಅಂಶಗಳು

ಸಮೀಕ್ಷೆಯ ಪ್ರಕಾರ, ಅತ್ಯಂತ ಹಿಂದುಳಿದ ಜಾತಿಯ ಜನ (extremely backward caste – EBC) 36.01%, ಹಿಂದುಳಿದ ಸಮುದಾಯ (Other Backward Caste – OBC) 27.12% ಮತ್ತು ಸಾಮಾನ್ಯ ವರ್ಗ 15.52% ಇದ್ದಾರೆ. ಪರಿಶಿಷ್ಟ ಜಾತಿಯವರು 19.65% ಮತ್ತು ಪರಿಶಿಷ್ಟ ಪಂಗಡದವರು 1.68% ಇದ್ದಾರೆ. OBCಗಳಲ್ಲಿ ಯಾದವರು 14.26%ರಷ್ಟಿದ್ದರೆ, ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27% ಮತ್ತು 2.87% ಜನಸಂಖ್ಯೆಯನ್ನು ಹೊಂದಿದ್ದಾರೆ. ಭೂಮಿಹಾರ್‌ಗಳು 2.86 ಪ್ರತಿಶತ, ಬ್ರಾಹ್ಮಣರು 3.66 ಪ್ರತಿಶತ, ಮುಸಾಹರ್‌ಗಳು 3 ಪ್ರತಿಶತ ಇದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version