ನವದೆಹಲಿ: ವೈವಿಧ್ಯಮಯ ಅಡುಗೆಮನೆ ಸಾಮಗ್ರಿಗಳಿಗೆ ಜನಪ್ರಿಯವಾಗಿರುವ ಸೆಲ್ಲೊ ವರ್ಲ್ಡ್ (Cello World) ಷೇರು ಮಾರುಕಟ್ಟೆಗೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು, ಹೊಸ ಕೋಟ್ಯಧಿಪತಿಯ (Billionaire) ಉದಯಕ್ಕೆ ಕಾರಣವಾಗಿದೆ. ಸೆಲ್ಲೊ ವರ್ಲ್ಡ್ ಅಧ್ಯಕ್ಷ 59ರ ಹರೆಯದ ಪ್ರದೀಪ್ ರಾಠೋಡ್ (Pradeep Rathod) ಅವರ ಶೇ. 44 ಪಾಲಿನ ಮೌಲ್ಯ ಇದೀಗ 8,300 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಕಂಪನಿ ಷೇರು ಮಾರುಕಟ್ಟೆಗೆ ನವೆಂಬರ್ 6ರಂದು ಪ್ರವೇಶಿಸಿತ್ತು.
ಸೆಲ್ಲೊ ವರ್ಲ್ಡ್ ಬಿಎಸ್ಇ(BSE)ಯಲ್ಲಿ 13.31 ಲಕ್ಷ ಷೇರುಗಳು ಮತ್ತು ಎನ್ಎಸ್ಇ(NSE)ಯಲ್ಲಿ 1.79 ಕೋಟಿ ಷೇರುಗಳೊಂದಿಗೆ ಮಾರುಕಟ್ಟೆಯಲ್ಲಿ 16,806.58 ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ. ಆರಂಭಿಕ ಸಾರ್ವಜನಿಕ ಕೊಡುಗೆ(IPO)ಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಪ್ರತಿ ಷೇರಿಗೆ ಪ್ರೈಸ್ ಬ್ಯಾಂಡ್ 617-648 ರೂ. ಇತ್ತು.
ಪ್ರದೀಪ್ ರಾಠೋಡ್ ಯಾರು?
- ಪ್ರದೀಪ್ ರಾಥೋಡ್ ಪ್ಲಾಸ್ಟಿಕ್ ಮತ್ತು ಥರ್ಮೋವೇರ್ ವಸ್ತುಗಳು, ಕಚ್ಚಾ ವಸ್ತುಗಳ ತಯಾರಿಕೆ ಹಾಗೂ ವ್ಯಾಪಾರದಲ್ಲಿ 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
- ಸೆಲ್ಲೊ ವರ್ಲ್ಡ್ ಪ್ರಾರಂಭವಾದಾಗಿನಿಂದ ಅವರು ನಿರ್ದೇಶಕರಾಗಿ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
- ಪ್ರದೀಪ್ ರಾಥೋಡ್ ಅವರ ಮಗ ಗೌರವ್ ಮತ್ತು ಸಹೋದರ ಪಂಕಜ್ ಜಂಟಿಯಾಗಿ ವ್ಯವಹಾರದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ರಾಥೋಡ್ ಕುಟುಂಬ ಸೆಲ್ಲೊ ಬ್ರ್ಯಾಂಡ್ ಅಡಿಯಲ್ಲಿ ಜನಪ್ರಿಯ ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಉತ್ಪಾದಿಸುವ, ಬಿಎಸ್ಇ ಉಲ್ಲೇಖಿಸಿದ ಕಂಪನಿ ವಿಮ್ ಪ್ಲಾಸ್ಟ್ ಲಿಮಿಟೆಡ್ನ ಪ್ರಮುಖ ಪ್ರವರ್ತಕರಾಗಿದ್ದಾರೆ.
- ವ್ಯವಹಾರದ ಹೊರತಾಗಿ ಪ್ರದೀಪ್ ರಾಥೋಡ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಬಾದಾಮಿಯಾ ಚಾರಿಟಬಲ್ ಟ್ರಸ್ಟ್ (Badamia Charitable Trust)ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ ಅವರು ಜಿಟೊ ಆಡಳಿತ ತರಬೇತಿ ಪ್ರತಿಷ್ಠಾನ (JITO Administrative Training Foundation)ದ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: Muhurat Trading: ದೀಪಾವಳಿ ಹಿನ್ನೆಲೆ ಇಂದು ಸಂಜೆ ‘ಮುಹೂರ್ತ ಟ್ರೇಡಿಂಗ್’; ಏನಿದರ ವೈಶಿಷ್ಟ್ಯ?
ಸೆಲ್ಲೊ ವರ್ಲ್ಡ್ ಕಂಪನಿ ಬಗ್ಗೆ
ಪ್ರದೀಪ್ ಅವರ ತಂದೆ ಘಿಸುಲಾಲ್ ರಾಥೋಡ್ ಮುಂಬೈಯಲ್ಲಿ ಸೆಲ್ಲೊ ಕಂಪನಿಯನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಈ ಕಂಪನಿ ಭಾರತೀಯ ಅಡುಗೆಮನೆಗೆ ಅಗತ್ಯವಾದ ಥರ್ಮೋವೇರ್ ಪಾತ್ರೆಗಳನ್ನು ಉತ್ಪಾದಿಸತೊಡಗಿತ್ತು. ನಂತರ ಅದರ ಉತ್ಪನ್ನಗಳ ಶ್ರೇಣಿ ವಿಸ್ತಾರವಾಗುತ್ತಾ ಹೋಯಿತು. ಇದೀಗ ಸೆಲ್ಲೊ ವರ್ಲ್ಡ್ ವ್ಯಾಪಕ ಶ್ರೇಣಿಯ ಗ್ರಾಹಕ ಗೃಹೋಪಯೋಗಿ ವಸ್ತುಗಳು, ಬರವಣಿಗೆ ಉಪಕರಣಗಳು ಮತ್ತು ಲೇಖನ ಸಾಮಗ್ರಿಗಳು, ಇದಕ್ಕೆ ಸಂಬಂಧಿತ ಉತ್ಪನ್ನಗಳೊಂದಿಗೆ ಪೀಠೋಪಕರಣಗಳನ್ನು ತಯಾರಿಸುತ್ತಿದೆ. 2017ರಲ್ಲಿ ಸೆಲ್ಲೊ ಗ್ಲಾಸ್‌ವೇರ್ ಮತ್ತು ಓಪಲ್ ವೇರ್ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ವ್ಯವಹಾರವನ್ನು ಇನ್ನಷ್ಟು ವೈವಿಧ್ಯಮಯವನ್ನಾಗಿಸಿತು. ಹೀಗೆ ‘ಸೆಲ್ಲೊ’ ಬ್ರ್ಯಾಂಡ್ ಅಡಿಯಲ್ಲಿ ತನ್ನ ಉತ್ಪನ್ನಗಳನ್ನು ಮತ್ತಷ್ಟು ವಿಸ್ತರಿಸಿತು. ಪ್ರಸ್ತುತ ದಮನ್, ಹರಿದ್ವಾರ, ಬಡ್ಡಿ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 13 ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ರಾಜಸ್ಥಾನದಲ್ಲಿ ಗಾಜಿನ ಪಾತ್ರೆ ನಿರ್ಮಿಸಲಾಗುತ್ತಿದೆ. ಈ ವರ್ಷ ಸೆಲ್ಲೊ ನಿವ್ವಳ ಲಾಭದಲ್ಲಿ ಶೇ. 30ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ 219.52 ಕೋಟಿ ರೂ.ಗೆ ಹೋಲಿಸಿದರೆ 2023ರ ಹಣಕಾಸು ವರ್ಷದಲ್ಲಿ 285 ಕೋಟಿ ರೂ.ಗೆ ಲಾಭ ತಲುಪಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ