ಹೊಸದಿಲ್ಲಿ: ತನ್ನ ಮಹತ್ವಾಕಾಂಕ್ಷೆಯ ಸುಧಾರಣೆಗಳ ಒಂದು ಭಾಗವಾದ, ವಸಾಹತು ಕಾಲದ ಕ್ರಿಮಿನಲ್ ಕೋಡ್, ಜಸ್ಟಿಸ್ ಕೋಡ್‌ಗಳ ಬದಲಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸರ್ಕಾರ ಮುಂದಾಗಿದೆ. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ (Winter Parliament Session) ಇವುಗಳಿಗೆ ಪರ್ಯಾಯ ವಿಧೇಯಕಗಳ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಕಲಾಪದಲ್ಲಿ ಇವು ಅಂಗೀಕಾರವಾದರೂ, ಇವುಗಳನ್ನು ಜಾರಿಗೆ ತರುವ ಅವಕಾಶಕ್ಕಾಗಿ ಮೋದಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬರುವ ವರೆಗೆ ಕಾಯಬೇಕಾಗಿದೆ. ಅಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಅಧಿಕಾರ ಹಿಡಿದರೆ ಇವು ಜಾರಿಯಾಗಲಿವೆ.
ಮೋದಿ ಸರ್ಕಾರ ಮುಂದಾಗಿರುವ ʼಅವಸಾಹತೀಕರಣ ಪ್ರಕ್ರಿಯೆʼಯಲ್ಲಿ ಕ್ರಿಮಿನಲ್ ಕೋಡ್‌ಗಳ ಬದಲಾವಣೆ ನಿರ್ಣಾಯಕ ಹೆಜ್ಜೆಯಾಗಿದೆ. ಭಾರತೀಯ ದಂಡ ಸಂಹಿತೆಯ (Indian Penal Code – IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ವಿಧೇಯಕ- 2023 ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆ (Criminal procedure Code – CrPC) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ವಿಧೇಯಕ- 2023 ಮಂಡನೆಯಾಗಲಿವೆ. ಜೊತೆಗೆ ಭಾರತೀಯ ಸಾಕ್ಷಿ ಮಸೂದೆ (Bharatiya Sakshi Bill – BSB) ಕೂಡ ಮಂಡನೆಯಾಗಲಿವೆ. ಇವು ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಅಥವಾ 2024ರ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೂರು ವಿಧೇಯಕಗಳನ್ನು ಆಗಸ್ಟ್ 11ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು ಮತ್ತು ಆಯ್ಕೆ ಸಮಿತಿಗೆ ಕಳುಹಿಸಲಾಯಿತು. ಹದಿನೈದು ದಿನಗಳ ಹಿಂದೆ ರಾಜ್ಯಸಭೆಯ ಅಧ್ಯಕ್ಷರ ಮುಂದೆ ಆಯ್ಕೆ ಸಮಿತಿ ತನ್ನ ಶಿಫಾರಸುಗಳೊಂದಿಗೆ ವರದಿಯನ್ನು ಇರಿಸಿದೆ. ಹೊಸ ಕ್ರಿಮಿನಲ್ ಕೋಡ್ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಗಾಧ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಹೀಗಾಗಿ ಬದಲಾವಣೆ ತರುವುದು ಸವಾಲು ಎಂದು ಕೇಂದ್ರ ಏಜೆನ್ಸಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಭಾವಿಸಿದ್ದಾರೆ.
“ಹೊಸ ಕೋಡ್ ಜಾರಿಗೆ ಬರುತ್ತಿದ್ದಂತೆ, BNSನ ಹೊಸ ವಿಭಾಗಗಳ ಅಡಿಯಲ್ಲಿ ಕೇವಲ ಹೊಸ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಆದರೆ ರಾಜ್ಯಗಳು ಮತ್ತು ಕೇಂದ್ರ ಏಜೆನ್ಸಿಗಳಲ್ಲಿರುವ ಲಕ್ಷಾಂತರ ಅಪರಾಧಗಳಿಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಐಪಿಸಿಯ ಹಳೆಯ ಸೆಕ್ಷನ್‌ಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರೆಸುತ್ತವೆ. ಹಳೆಯ ಪ್ರಕರಣಗಳ ಮೇಲೆ ಯಾವುದೇ ಹಿಂದಿನ ಪರಿಣಾಮ ಬೀರುವುದಿಲ್ಲ” ಎಂದು ಕೇಂದ್ರ ಸರ್ಕಾರದ ಏಜೆನ್ಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿರೋಧ ಪಕ್ಷಗಳ ಸಂಸದರು ಪ್ರಸ್ತಾವಿತ ಕೋಡ್‌ಗಳನ್ನು “ಹಿಂದಿನ ಕೋಡ್‌ಗಳ ಮರುಜೋಡಣೆ” ಮತ್ತು “ಸ್ಟಂಟ್” ಎಂದು ಕರೆದಿದ್ದಾರೆ. ಮೋದಿ ಸರ್ಕಾರ ಈ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಬಹುದು ಎಂದು ಊಹಿಸಿರುವ ಹಿರಿಯ ರಾಜಕಾರಣಿಗಳು ಪ್ರಸ್ತಾವಿತ ಬೆಳವಣಿಗೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. “ಇವು ನಮ್ಮ ದಂಡ- ಅಪರಾಧ ನ್ಯಾಯಶಾಸ್ತ್ರದ ತಳಹದಿಯನ್ನು ರೂಪಿಸುವ ಅತ್ಯಂತ ಮಹತ್ವದ ಶಾಸನಗಳಾಗಿವೆ ಎಂದು ನಾನು ನಂಬುತ್ತೇನೆ. ಹಾಗಾಗಿ, ಅಸ್ತಿತ್ವದಲ್ಲಿರುವ ಕ್ರಿಮಿನಲ್-ದಂಡದ ಕಾನೂನುಗಳ ಬದಲಿಗೆ ಅವುಗಳನ್ನು ತರುವುದು ರಾಜಕೀಯದ ಮೇಲೆ, ಸಾರ್ವಜನಿಕ ಜೀವನದ ಮೇಲೆ ದೀರ್ಘಾವಧಿಯ ಬೃಹತ್ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ತೀವ್ರ ಎಚ್ಚರಿಕೆ ಮತ್ತು ಪರಿಶೀಲನೆ ಬೇಕು” ಎಂದಿದ್ದಾರೆ.
“ಇಂತಹ ವಿಷಯಗಳ ಬಗ್ಗೆ ಸಂಸತ್ತು ಶಾಸನ ಮಾಡುವ ಮೊದಲು ಎಲ್ಲಾ ವಿಭಾಗಗಳ ತಜ್ಞರ- ಉದಾ: ನ್ಯಾಯಶಾಸ್ತ್ರಜ್ಞರು, ಸಾರ್ವಜನಿಕ ಕಾರ್ಯಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು, ಸಾರ್ವಜನಿಕರು ಇತ್ಯಾದಿ- ಜತೆಗೆ ವಿವರವಾದ ಚರ್ಚೆ ನಡೆಸಬೇಕು” ಎಂದಿದ್ದಾರೆ.
ಆಡಳಿತಾತ್ಮಕ ಸವಾಲುಗಳು
ಹೊಸ ನೀತಿ ಸಂಹಿತೆ ಜಾರಿಯಾಗುವ ತಿಂಗಳ ಮುಂಚೆಯೇ ಸರ್ಕಾರವು ಪೊಲೀಸ್ ಅಧಿಕಾರಿಗಳಿಗೆ ವ್ಯವಸ್ಥಿತ ತರಬೇತಿಯನ್ನು ಪ್ರಾರಂಭಿಸುತ್ತದೆ ಮತ್ತು ನ್ಯಾಯಾಂಗಕ್ಕೂ ಇದೇ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಎಲ್ಲಾ ಹೊಸ ಕೋಡ್‌ಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪ್ರಾಥಮಿಕ ಹಂತದವರೆಗೂ ಹರಡುವುದನ್ನು ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯ ಖಚಿತಪಡಿಸುತ್ತದೆ. ಇದು ಪ್ರತಿ ಪೊಲೀಸ್ ಠಾಣೆ ಮತ್ತು ಪ್ರತಿ ಸೆಷನ್ ಮತ್ತು ಜಿಲ್ಲಾ ನ್ಯಾಯಾಲಯವನ್ನು ತಲುಪಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
“ಹೊಸ ಕೋಡ್ ಅನ್ನು ಅಭ್ಯಾಸ ಮಾಡಲು ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಆದರೂ ಇದು ಸಮಯದ ಅಗತ್ಯವಾಗಿದೆ. ಹಳೆಯ ವ್ಯವಸ್ಥೆಯು ವಸಾಹತುಶಾಹಿಯದಾಗಿತ್ತು. ಹಲವಾರು ತಿದ್ದುಪಡಿಗಳು ಮತ್ತು ಬದಲಾವಣೆಗಳನ್ನು ಮಾಡಿದ್ದರೂ ಕ್ರಿಮಿನಲ್ ಕೋಡ್ ಕೂಡ ಆರೋಪಿಯ ಪರವಾಗಿದೆ. ಕೂಲಂಕಷ ಬದಲಾವಣೆ ಅಗತ್ಯವಿತ್ತು” ಎಂದು ಅಧಿಕಾರಿ ಹೇಳಿದರು.
“ಅನೇಕ ದೇಶಗಳು ತಮ್ಮ ಅಪರಾಧ ನ್ಯಾಯ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಸಲು ಆಳವಾದ ಸುಧಾರಣೆಯನ್ನು ಕೈಗೊಂಡಿವೆ. ಆಧುನಿಕ ಕಾಲದಲ್ಲಿ ನಮ್ಮ ಕಾನೂನು ಚೌಕಟ್ಟು ಮತ್ತು ಕ್ರಿಮಿನಲ್ ಕೋಡ್‌ಗಳು ಹೊಸ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಸಾಮಾಜಿಕ ಬದಲಾವಣೆಗಳಿಂದಾಗಿ ಪ್ರಕರಣಗಳ ಹೆಚ್ಚಿನ ಸಂಕೀರ್ಣತೆ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅಪರಾಧದ ಅಂತರಾಷ್ಟ್ರೀಕರಣ ಇತ್ಯಾದಿ ಹೊಸ ಸವಾಲುಗಳನ್ನು ಎದುರಿಸಲು ನಮಗೆ ಹೊಸ ವ್ಯವಸ್ಥೆಯ ಅಗತ್ಯವಿದೆ” ಎಂದು ಇನ್ನೊಬ್ಬರು ಐಪಿಎಸ್ ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಏಕರೂಪ ನಾಗರಿಕ ಸಂಹಿತೆ ವ್ಯವಸ್ಥಿತವಾಗಿ ಜಾರಿಗೆ ಬರಲಿ