ನವದೆಹಲಿ: ಹೊಸ ಆಧಾರ್ ಕಾರ್ಡ್ (Aadhaar Card) ಮಾಡಿಸಲು ಹೋದಾಗ ಒಂದು ಡಾಕ್ಯುಮೆಂಟ್ ಕೇಳುತ್ತಾರೆ, ವಾಹನ ಚಾಲನಾ ಪರವಾನಿ ಪಡೆಯಲು ಹೋದರೆ ಅವರು ಬೇರೊಂದು ದಾಖಲೆ ಬೇಕು ಎನ್ನುತ್ತಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ದಾಖಲೆ ಕೇಳಿದರೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ. ಮೇಲಾಗಿ ಎಲ್ಲಿಗೆ ಯಾವ ದಾಖಲೆ ಕೊಂಡೊಯ್ಯಬೇಕು ಎಂಬ ಗೊಂದಲ ಕಾಡುತ್ತದೆ. ಆದರೆ, ಅಕ್ಟೋಬರ್ 1ರಿಂದ ಜನರಿಗೆ ಈ ಗೊಂದಲ ಇರುವುದಿಲ್ಲ. ಬಹುತೇಕ ದಾಖಲೆ ಪಡೆಯಲು (Single Document) ಇನ್ನು ಮುಂದೆ ‘ಜನನ ಪ್ರಮಾಣಪತ್ರ’ ಒಂದೇ (Birth Certificate) ಸಾಕಾಗುತ್ತದೆ.
ಹೌದು, ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ (2023)ಯು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದಾಗಿನಿಂದ ದೇಶದಲ್ಲಿ ಹಲವು ದಾಖಲೆ ಪಡೆಯಲು ಒಂದೇ ದಾಖಲೆ ನೀಡಬಹುದಾಗಿದೆ. ಜನನ ಪ್ರಮಾಣಪತ್ರ ಒಂದನ್ನು ನೀಡುವ ಮೂಲಕ ಬೇರೆ ದಾಖಲೆಗಳನ್ನು ಪಡೆಯಬಹುದಾಗಿದೆ. ಇದರಿಂದ ದೇಶದ ಕೋಟ್ಯಂತರ ಜನ ಒಂದೇ ಪ್ರಮಾಣಪತ್ರ ನೀಡಿ, ಬೇರೆ ಬೇರೆ ದಾಖಲೆ ಪಡೆಯಲು ಅನುಕೂಲವಾಗಲಿವೆ.
Registration of Births and Deaths (Amendment) Act, 2023 that allows the use of a birth certificate as a single document for admission to an educational institution, issuance of a driving licence, preparation of voter list, Aadhaar number, registration of marriage or appointment… pic.twitter.com/fk7KIJ2myv
— ANI (@ANI) September 14, 2023
ಯಾವೆಲ್ಲ ದಾಖಲೆ ಪಡೆಯಬಹುದು?
ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಆಧಾರ್, ವಿವಾಹ ನೋಂದಣ, ಸರ್ಕಾರಿ ಉದ್ಯೋಗ ಸೇರಿ ಯಾವುದೇ ದಾಖಲೆ ಪಡೆಯಲು ಜನನ ಪ್ರಮಾಣಪತ್ರವನ್ನು ಏಕ ದಾಖಲೆಯಾಗಿ ಬಳಸಬಹುದಾಗಿದೆ. ಡಿಜಿಟಲ್ ನೋಂದಣಿಗೆ ಆದ್ಯತೆ, ಸಾರ್ವಜನಿಕ ಸೇವೆಗಳು ಜನರಿಗೆ ಸರಿಯಾಗಿ ತಲುಪಲಿ ಹಾಗೂ ಸಾಮಾಜಿಕ ಪಾರದರ್ಶಕತೆ ಕಾಪಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ, ಅಕ್ಟೋಬರ್ 1ರಿಂದ ಹೊಸ ನಿಯಮ ಅನ್ವಯವಾಗಲಿದೆ.
ಇದನ್ನೂ ಓದಿ: RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!
ಕಳೆದ ತಿಂಗಳು ಮುಕ್ತಾಯವಾದ ಸಂಸತ್ ಮುಂಗಾರು ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿಯ ವಿಧೇಯಕಕ್ಕೆ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿವೆ. 1969ರಲ್ಲಿ ಜಾರಿಗೆ ಬಂದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ವಿಧೇಯಕವನ್ನು ಮಂಡಿಸಿದ್ದರು. ಲೋಕಸಭೆಯಲ್ಲಿ ಆಗಸ್ಟ್ 1 ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್ 7ರಂದು ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿತ್ತು.