:: ಶ್ರೀಪಾದ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ (1948) ಸೆಂಟ್ರಲ್ ಪ್ರವೆನ್ಸಿಯ ಮುಖ್ಯಮಂತ್ರಿಗಳಾದ, ಸ್ವಾತಂತ್ರ್ಯ ಹೋರಾಟಗಾರ, ಪಂಡಿತ ರವಿಶಂಕರ ಶುಕ್ಲಾ ಅವರು ರಾಜ್ಯದ ಪರಿಸ್ಥಿತಿಯನ್ನು ಅರಿಯಲು ಪರ್ಯಟನೆ ಮಾಡುತ್ತಾ ಗುಡ್ಡಗಾಡು ಪ್ರದೇಶ ಕುನಕುರಿಗೆ ಬಂದಾಗ, ಸ್ವಾಗತದ ಬದಲು ಪ್ರತಿಭಟನೆ ಎದುರಿಸಬೇಕಾಯಿತು. ಕಪ್ಪು ಬಾವುಟ ಹಿಡಿದು ʼಗೋಬ್ಯಾಕ್ʼ ಎಂಬ ಘೋಷಣೆಯನ್ನು ಗಿರಿಜನರು ಕೂಗಿದರು. ಪ್ರತಿಭಟನೆಯ ಕಾವು ಜೋರಾಗಿತ್ತು. ಮುಖ್ಯಮಂತ್ರಿಗಳು ವಾಪಸು ತೆರಳಬೇಕಾಯ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂತಸ ಸಂಭ್ರಮ ದೇಶದೆಲ್ಲೆಡೆ ಕಂಡು ಬಂದರೆ ಇಲ್ಲಿ ವಿರೋಧ! ಇದ್ಯಾಕೆ? ಹಿಗೇಕೆ? ಎಂದು ಮೂಲ ಹಿಡಿದು ಹೊರಟಾಗ ಗೊತ್ತಾದ ವಿಷಯ ಬೇರೆ. ವಿದೇಶಿ ಮಿಶನರಿಗಳಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಸಹಿಸಲಿಕ್ಕೆ ಆಗ್ತಾ ಇರಲಿಲ್ಲ. ಅವರ ಚಿತಾವಣೆಯಿಂದ ಹೀಗಾಗಿತ್ತು.
ಈ ಗಂಭೀರ ಸಮಸ್ಯೆಗೆ ಪರಿಹಾರ ಎಂದರೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವುದು. ಅದಕ್ಕಾಗಿ ಸೂಕ್ತ, ಸಮರ್ಥ ವ್ಯಕ್ತಿಗಾಗಿ ಹುಡುಕಾಟ ಮಾಡಿ ನಾಗಪುರದಲ್ಲಿ ವಕೀಲವೃತ್ತಿಯನ್ನು ನಡೆಸುತ್ತಿರುವ ರಮಾಕಾಂತ ಕೇಶವ (ಬಾಳಾಸಾಹೇಬ) ದೇಶಪಾಂಡೆಯವರನ್ನು ಕ್ಷೇತ್ರ ಅಭಿವೃದ್ಧಿಯ ಅಧಿಕಾರಿಯಾಗಿ ನಿಯುಕ್ತಿ ಮಾಡಿದರು. ಜನಸಾಮಾನ್ಯರ ಬಗ್ಗೆ ಕಳಕಳಿಯಿರುವ ಬಾಳಾ ಸಾಹೇಬ ದೇಶಪಾಂಡೆಯವರು 110 ಶಾಲೆಗಳನ್ನು ಪ್ರಾರಂಭ ಮಾಡಿದರು. ಆ ಶಾಲೆಯ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ದೇಶಭಕ್ತಿಯ ಪಾಠ ಮಾಡಿದರು. ಒಂದೇ ವರ್ಷದಲ್ಲಿ ಪ್ರತಿಭಟನೆ ನಡೆದ ಪ್ರದೇಶದಲ್ಲಿ ಮುಖ್ಯಮಂತ್ರಿಗಳಿಗೆ ಅದ್ಧೂರಿ ಸ್ವಾಗತದ ಕಾರ್ಯಕ್ರಮ ಏರ್ಪಡಿಸಿದರು. ಹೀಗೆ ವನವಾಸಿಗಳಲ್ಲಿ ಸ್ವಾಭಿಮಾನ ಜಾಗೃತಿಗೊಳಿಸಿದರು. ನಂತರ ಮುಖ್ಯಮಂತ್ರಿಗಳ ಅಕಾಲಿಕ ನಿಧನದಿಂದ ಮತ್ತು ಉಳಿದವರ ಅಸಹಕಾರದಿಂದ ಕೆಲಸ ಅರ್ಧಕ್ಕೆ ನಿಂತಿತು.
ಬಾಳಾಸಾಹೇಬ ದೇಶಪಾಂಡೆಯವರಿಗೆ ತುಂಬ ಬೇಸರವಾಯಿತು. ಆಗಿನ ರಾ.ಸ್ವ. ಸಂಘದ ಸರಸಂಘಚಾಲಕರಾದ ಗುರೂಜಿಯವರ ಮಾರ್ಗದರ್ಶನ ಕೇಳಿದಾಗ ಅನುಭವವನ್ನು ಬಳಸಿಕೊಂಡು ನೀವೇ ಸ್ವತಂತ್ರವಾದ ಸಂಘಟನೆಯನ್ನು ಪ್ರಾರಂಭ ಮಾಡಿ ಎಂದು ಸಲಹೆ ನೀಡಿದರು. ಪ್ರಚಾರಕರಾದ ಮೊರೋಭಾಯಿ ಕೇತ್ಕರವರನ್ನು ಸಹಕಾರಿಯಾಗಿ ನೀಡಿದರು. ಬಾಳಾ ಸಾಹೇಬ ದೇಶಪಾಂಡೆಯವರು 1952 ಡಿಸಂಬರ್ 26ರಂದು ವನವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಛತ್ತೀಸಗಡದ ಜಶಪುರದಲ್ಲಿ ಅಖಿಲ ಅಭಾರತೀಯ ವನವಾಸಿ ಕಲ್ಯಾಣಾಶ್ರಮದ ಬೀಜಾಂಕುರ ಮಾಡಿದರು. ಈ ಕಾರ್ಯವನ್ನು ಪ್ರಾರಂಭ ಮಾಡಲು ಅಗತ್ಯವಾದ ಸ್ಥಳವನ್ನು ನೀಡಿದವರು ಜಶಪುರದ ರಾಜ ಶ್ರೀ ವಿಜಯಭೂಷಣಸಿಂಗ್ ಜುದೇವ. ನಂತರ ಆಶ್ರಮದ ನಿರ್ವಹಣೆಗೆ 150 ಎಕರೆ ಕೃಷಿಭೂಮಿಯನ್ನೂ ನೀಡಿದ್ದಾರೆ. ಇಂದಿಗೂ ಜುದೇವ ರಾಜಮನೆತದವರು ಸಹೃದಯದಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ನಿಶ್ಚಿತ ಕಾರ್ಯಯೋಜನೆ ಮತ್ತು ತರಬೇತಿ ಪಡೆದ ಕಾರ್ಯಕರ್ತರಿಂದ ಕಾರ್ಯದ ಮುನ್ನಡೆ ಸಾಗಿತು. ಮೂರು ಘೋಷವಾಕ್ಯ ಮೂಲವಾಗಿಟ್ಟುಕೊಂಡು ಕಾರ್ಯದ ಉದ್ದೇಶ ಸ್ಪಷ್ಟಪಡಿಸಲಾಯಿತು. ತೂ ಮೈ ಏಕ್ ರಕ್ತ (ನಾವು ಒಂದೇ ರಕ್ತದವರು); ಸೇವ್ ಕಲ್ಚರ್, ಸೇವ್ ಐಡೆಂಟಿಟಿ, ಸೇವ್ ನ್ಯಾಶನಾಲಿಟಿ (ಸಂಸ್ಕೃತಿ ಉಳಿಸಿ, ಅಸ್ಮಿತೆ ಉಳಿಸಿ, ರಾಷ್ಟ್ರೀಯತೆ ಉಳಿಸಿ); ವನವಾಸಿ, ಗ್ರಾಮವಾಸಿ ಮತ್ತು ನಗರವಾಸಿ- ನಾವೆಲ್ಲ ಭಾರತವಾಸಿ ಎಂಬ ಸಮರಸ ಭಾವದಿಂದ ಕಾರ್ಯಕರ್ತರು ಹೊಣೆ ಹೊತ್ತು ಕಾರ್ಯ ಬೆಳಸಿದರು.
ಅವಶ್ಯಕತೆಯುಳ್ಳವರಿಗೆ, ಅವಶ್ಯಕತೆಯಿರುವೆಡೆ ಸೇವಾಕಾರ್ಯ, ಸರ್ಕಾರದಿಂದ ದೊರಕುವ ಸೌಲಭ್ಯಗಳು, ಅರಣ್ಯ ಹಕ್ಕು, ಸರ್ಕಾರದ ದೊಡ್ಡ ದೊಡ್ಡ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜನಜಾಗರಣ ಕಾರ್ಯ
ಕಾರ್ಯವು ನಿರಂತರ ಮತ್ತು ಪರಿಣಾಮಕಾರಿಯಾಗಿ ನಡೆಯಲು ಗ್ರಾಮ, ಪ್ರಕಲ್ಪ ಸಮಿತಿಗಳ ರಚನೆ – ಸಂಘಟನಾಕಾರ್ಯ ಈ ಮುಖದಲ್ಲಿ ಕಾರ್ಯಬೆಳೆಸುವ ಪ್ರಯತ್ನ ಮಾಡುತ್ತಾ ಬಂದ ಪರಿಣಾಮ, ಇಂದು ದೇಶಾದ್ಯಂತ 15,000 ವನವಾಸಿ ಗ್ರಾಮಗಳಲ್ಲಿ 20,000ಕ್ಕೂ ಹೆಚ್ಚು ಸೇವಾ ಕಾರ್ಯಗಳ ಮುಖಾಂತರ ಸಮಾಜ ಪರಿವರ್ತನೆ ಕಂಡುಬರುತ್ತಿದೆ. ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆಯ ಭಾವದಿಂದ ದೇಶೀಯ ಭಾವನೆ ಜಾಗೃತಿಯಾಗುತ್ತಿರುವುದು ಅನುಭವಕ್ಕೆ ಬರುತ್ತಿದೆ. ರಾಜಸ್ಥಾನದಲ್ಲಿ ಪಾರಂಪರಿಕ ಕಲೆಗಳಿಂದ ವಸ್ತುಗಳ ತಯಾರಿ ಮತ್ತು ಮಾರಾಟದಿಂದ ಆರ್ಥಿಕ ಸ್ವಾವಲಂಬನ, ಮಹಾರಾಷ್ಟ್ರದಲ್ಲಿ ವನವಾಸಿಗಳ ಏಳಿಗೆಗಾಗಿ ಕೆಲಸ ಮಾಡುತ್ತಿರುವ ವಿವಿಧ ವಿಚಾರದ ಸಂಘಟನೆಗಳ ಸಮನ್ವಯದೊಂದಿಗೆ ಸಮಾಜಕಾರ್ಯ, ವನವಾಸಿಗಳಿಗೂ ಆಧುನಿಕ ಆರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡಲು ಕರ್ನಾಟಕದಲ್ಲಿ ಟೆಲಿಮೆಡಿಸಿನ್, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮೊಬೈಲ್ ಮೆಡಿಕಲ್ ವ್ಯಾನ್ (ಸಂಚಾರಿ ಆರೋಗ್ಯ ವಾಹಿನಿ), ಆವಶ್ಯಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳು (ಛತ್ತೀಸಗಡದ ಜಶಪುರ, ಕೇರಳದ ವಯನಾಡಿನ ಮುತ್ತಿಲ), ಅನೇಕ ರಾಜ್ಯಗಳಲ್ಲಿ ಆರೋಗ್ಯ ರಕ್ಷಕರು ದೂರದ ಕಾಡಿನ ವಾಸಿಗಳಾದ ವನಬಂಧುಗಳಿಗೆ ಆರೋಗ್ಯ ಸೇವೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ವನವಾಸಿಗಳ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ಪಾರಂಪರಿಕ ನೃತ್ಯ ಕಲೆಯನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಛತ್ತೀಸಗಡದ ಜಶಪುರದಲ್ಲಿ ಲೋಕಕಲಾ ಉತ್ಸವ ಪ್ರತಿವರ್ಷ ನಡೆಸುತ್ತಿರುವ ಕಾರಣದಿಂದ ಹೊಸ ತಲೆಮಾರಿನ ಯುವನೃತ್ಯ ತಂಡಗಳು ತಯಾರಾಗುತ್ತಿವೆ.
ರಾಜಾ ವಿಜಯಭೂಷಣಸಿಂಗ್ ಜುದೇವ, ಜಗದೇವರಾಂ ಉರಾಂ
ಶಿಕ್ಷಣ ಆಯಾಮದ ಪ್ರಯತ್ನದಿಂದ ಸಿದ್ಧಪಡಿಸಿದ ʼಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬುಡಕಟ್ಟು ಜನರ ಕೊಡುಗೆʼ ರಾಷ್ಟ್ರೀಯ ಬುಡಕಟ್ಟು ಆಯೋಗದ(ಎನ್ಸಿಎಸ್‌ಟಿ) ಸಹಯೋಗದಿಂದ ದೇಶಾದ್ಯಂತ ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮಗಳು ನಡೆದಿವೆ. ಜನರಿಗೆ ಗೊತ್ತಿಲ್ಲದ, ಪುಸ್ತಕಗಳಲ್ಲಿ ಉಲ್ಲೇಖವಾಗದಿದ್ದ ವನವಾಸಿ ವೀರರ ಮತ್ತು ವೀರವನಿತೆಯರ ಪರಿಚಯ ಮೊಟ್ಟಮೊದಲ ಬಾರಿಗೆ ಆಯಿತು. ವನವಾಸಿ ಹಾಡಿಗಳಲ್ಲಿ ಐದು ಸಾವಿರ ವಿದ್ಯಾಲಯಗಳು, ಇನ್ನೂರೈವತ್ತು ವಿದ್ಯಾರ್ಥಿನಿಲಯಗಳು, ಔಪಚಾರಿಕ ಶಾಲೆಗಳೂ ಸೇರಿದಂತಿರುವ ಕೇಂದ್ರಗಳಲ್ಲಿ ವನವಾಸಿ ಬಂಧುಗಳ ಲಕ್ಷಕ್ಕೂ ಹೆಚ್ಚಿನ ಮಕ್ಕಳು ಸಂಸ್ಕಾರ ಶಿಕ್ಷಣ ಪಡೆಯುತ್ತಿದ್ದಾರೆ.
ಸರ್ಕಾರದ ನೀತಿ ನಿರೂಪಣೆಯಲ್ಲಿ ಸಹಾಯಕವಾಗುವ ʼವಿಷನ್ ಡಾಕ್ಯುಮೆಂಟ್ʼ- ದೃಷ್ಟಿ ಪತ್ರವನ್ನು ಸಮಾಜದ ಚಿಂತಕರು ಸಿದ್ಧಪಡಿಸಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರವೂ ಇದನ್ನು ಸ್ವೀಕರಿಸಿದೆ. ಉತ್ತಮ ಅಂಶಗಳು ಇದರಲ್ಲಿವೆ, ನಾವು ಅವಶ್ಯವಾಗಿ ಇದರಲ್ಲಿರುವ ಅಂಶಗಳನ್ನು ಪರಿಗಣಿಸುತ್ತೇವೆ ಎಂದೂ ಹೇಳಿದ್ದಾರೆ.
ವನವಾಸಿಗಳಲ್ಲಿ ಸಾಮಾಜಿಕ, ಹಾಗೂ ಧಾರ್ಮಿಕ ನೇತೃತ್ವ ನಿರ್ಮಾಣದ ಪ್ರಯತ್ನ ನಡೆಯುತ್ತಿದೆ. ಜಶಪುರದಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಜಗದೇವರಾಂ ಉರಾಂ ಅವರು ಅಖಿಲ ಭಾರತ ಅಧ್ಯಕ್ಷರಾಗಿ, ವಿದ್ಯಾರ್ಥಿ ನಿಲಯದ ಪೂರ್ವ ವಿದ್ಯಾರ್ಥಿಯಾಗಿದ್ದ ಸುದರ್ಶನ ಭಗತ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯಮಾಡಿದ್ದಾರೆ. ಕರ್ನಾಟಕದ ಮೊದಲ ಪೂರ್ಣಕಾಲೀನ ಕಾರ್ಯಕರ್ತರಾಗಿದ್ದ ಶಾಂತಾರಾಮ ಸಿದ್ದಿಯವರು ವಿಧಾನ ಪರಿಷತ್ತಿನ ಸದಸ್ಯರಾಗಿ, ಮಹಾರಾಷ್ಟ್ರದ ನಂದೂರಬಾರ ಹತ್ತಿರದ ಚೇತಾರಾಂ ಪವಾರ ಗ್ರಾಮ ವಿಕಾಸ ಕಾರ್ಯದ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ರೀತಿಯಲ್ಲಿ ಪ್ರತಿ ರಾಜ್ಯದಲ್ಲೂ ವನವಾಸಿ ಬಂಧುಗಳು ನೇತೃತ್ವವನ್ನು ವಹಿಸುತ್ತಿರುವುದು ಕಂಡುಬರುತ್ತಿದೆ.
1975ರ ತುರ್ತುಪರಿಸ್ಥಿಯ ನಂತರ ಬೇರೆ ಬೇರೆ ರಾಜ್ಯಗಳಲ್ಲಿ ಕಲ್ಯಾಣಾಶ್ರಮವು ಕಾರ್ಯವನ್ನು ವಿಸ್ತರಿಸುತ್ತ ಇಂದು ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ಅಂಡಮಾನಿನ ದ್ವೀಪಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. 1988ರಲ್ಲಿ ಕರ್ನಾಟಕದ ಮುಂಡಗೋಡ ತಾಲ್ಲೂಕಿನ ಚಿಪಗೇರಿಯಲ್ಲಿ ವಿದ್ಯಾರ್ಥಿನಿಲಯದಿಂದ ಪ್ರಾರಂಭವಾದ ಕಾರ್ಯವು ಹದಿನೇಳು ಜಿಲ್ಲೆಗಳಿಗೆ ಪಸರಿಸಿದೆ. ಐದುನೂರಕ್ಕೂ ಹೆಚ್ಚಿನ ಸೇವಾಕಾರ್ಯಗಳನ್ನು ಮಾಡುತ್ತಿದೆ. ಹತ್ತು ವಿದ್ಯಾರ್ಥಿನಿಲಯಗಳು, 250 ಮನೆಪಾಠ ಕೇಂದ್ರಗಳು, ಐದು ಸಂಚಾರಿ ವೈದ್ಯಕೀಯ ವಾಹಿನಿಗಳ ಮೂಲಕ ಸಾವಿರಾರು ಬಡ ವನವಾಸಿ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಪೂರ್ಣಕಾಲೀನ ಕಾರ್ಯಕರ್ತರಾಗಿ ಕಾರ್ಯ ಮಾಡುತ್ತಿದ್ದಾರೆ. ವೈಚಾರಿಕವಾಗಿ ದೂರವಿದ್ದವರೂ ಸೇವಾಕಾರ್ಯದಿಂದ ಪ್ರಭಾವಿತರಾಗಿ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ವನವಾಸಿಗಳು ಅತ್ಯಂತ ಹೆಚ್ಚಿನ ಸಂಸ್ಕಾರವಂತರು, ಸಂಸ್ಕೃತಿಯನ್ನು ಪಾಲನೆ ಮಾಡುವವರು. ಸಮಾಜಕ್ಕೆ ಅವರ ನೈಜ ಪರಿಚಯದ ಅಗತ್ಯವಿದೆ. ಆ ದೃಷ್ಟಿಯಿಂದ ವನವಾಸಿ ಇಮೇಜ್ ಎಂಡ್ ರಿಯಾಲಿಟಿ (ವನವಾಸಿ ಕಲ್ಪನೆ ಮತ್ತು ನೈಜತೆ) ವಿಷಯದಲ್ಲಿ ವಿಶ್ವವಿದ್ಯಾಲಯ ಮತ್ತು ಪ್ರಮುಖ ಕೇಂದ್ರಗಳಲ್ಲಿ ಉಪನ್ಯಾಸ, ಸಂವಾದ, ಕಾರ್ಯಾಗಾರಗಳನ್ನೂ ಪ್ರಾರಂಭಿಸಿದೆ. ಈ ಎಲ್ಲಾ ಕಾರ್ಯಗಳಿಂದ ವನವಾಸಿ ಬಂಧುಗಳಿಗೆ ಕಲ್ಯಾಣಾಶ್ರಮ ತಮ್ಮದೇ ಅನಿಸುತ್ತಿದೆ. ಅವರ ಸಹಯೋಗವೂ ದೊರೆಯುತ್ತಿದೆ. ಅ.ಭಾ.ವ. ಕಲ್ಯಾಣಾಶ್ರಮ ಭರವಸೆಯೊಂದಿಗೆ ಮುನ್ನಡೆಯುತ್ತಿದೆ. ಸಾಗಬೇಕಾದ ದೂರ ಸಾಕಷ್ಟಿದೆ. ಸರಿದಾರಿಯಲ್ಲಿ ಸಾಗುತ್ತಿರುವ ಕಲ್ಯಾಣಾಶ್ರಮಕ್ಕೆ ನಿಮ್ಮೆಲ್ಲರ ಸಹಕಾರದಿಂದ ಸಾಧಿಸುವ ವಿಶ್ವಾಸವಿದೆ.
(ಲೇಖಕರು ಜಶಪುರ ಅಖಿಲ ಭಾರತ ಕಲ್ಯಾಣಾಶ್ರಮದ ಕೇಂದ್ರ ಕಾರ್ಯಾಲಯ ಪ್ರಮುಖರು)