ಜಗತ್‌ಸಿಂಗ್‌ಪುರ: ನಮ್ಮ ಎಂಎಲ್‌ಎಗಳು ಯಾರೇ ಮದುವೆಗೆ ಕರೆದರೂ ಒಂದ್ನಿಮಿಷ ಹೋಗಿ ವಿಷ್ ಮಾಡಿ ಬರ್ತಾರೆ. ಇನ್ನು ಅವರದೇ ಮದುವೆ ಅಂದ್ರೆ ಮುಗೀತು ಬಿಡಿ, ಸಾಕ್ಷಾತ್ ಸ್ವರ್ಗವನ್ನೇ ಧರೆಗಿಳಿಸುವಷ್ಟು ಅದ್ಧೂರಿತನ ಮೆರೀತಾರೆ. ಇಂಥ ಜನಗಳ ನಡುವೆ ಒಡಿಶಾದ ಬಿಜೆಡಿ ಶಾಸಕ ತನ್ನ ಮದುವೆಗೇ ಹೋಗದೆ ಸುದ್ದಿ ಮಾಡಿದ್ದಾನೆ. ಕೇಳಿದರೆ, ಹೌದಾ? ನನ್ ಮದುವೇನಾ? ಯಾರೂ ನನಗೆ ನೆನಪೇ ಮಾಡಿಲ್ವಲ್ಲ ಅಂತಾನೆ. ಅತ್ತ ಕಾದು ಕಾದು ಸುಸ್ತಾದ ಹುಡುಗಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ.
ಯಾವುದಪ್ಪಾ ಇದು ಸ್ಪೆಷಲ್ ಕೇಸು ಅಂತೀರಾ? ಮ್ಯಾಟರ್‌ಗೆ ಬರೋಣ!
ಅವನು ತಿರ್ತೋಲ್‌ನ ಬಿಜೆಡಿ ಶಾಸಕ. ಹೆಸರು ಬಿಜಯಶಂಕರ ದಾಸ್. ಶನಿವಾರ ಅವನು ಜಗಜಿತ್‌ಸಿಂಗ್ ಪುರದ ನೋಂದಣಿ ಕಚೇರಿಯಲ್ಲಿ ಬಹುಕಾಲದ ಪ್ರೇಯಸಿಯನ್ನು ಮದುವೆ ಮಾಡಿಕೊಳ್ಳುವುದಾಗಿ ತೀರ್ಮಾನ ಆಗಿತ್ತು. ಅದರಂತೆ ಹುಡುಗಿ ಹಾರ ಹಿಡ್ಕೊಂಡು ಮನೆ ಮಂದಿಯನ್ನೆಲ್ಲ ಕಟ್ಕೊಂಡು ಬಂದಿದ್ದಳು. ಆದರೆ, ಎಷ್ಟು ಕಾದರೂ ಎಂಎಲ್‌ಎ ಆಸಾಮಿ ನಾಪತ್ತೆ. ಫೋನ್ ಮಾಡಿದರೆ ಸ್ವಿಚಾಫ್!
ಇದರಿಂದ ಸಿಟ್ಟುಗೊಂಡ ಯುವತಿ ಸೀದಾ ಜಗತ್ಸಿಂಗ್ ಪುರ ಸ್ಟೇಷನ್‌ಗೆ ಹೋಗಿದ್ದಾಳೆ. ಆಕೆ ಕೊಟ್ಟಿರುವ ದೂರಿನಲ್ಲಿ ಮಾಡಿರುವ ಆರೋಪಗಳನ್ನೆಲ್ಲ ಸೇರಿಸಿ ಹತ್ತಾರು ಸೆಕ್ಷನ್‌ಗಳನ್ನೇ ಜಡಿದುಬಿಟ್ಟಿದ್ದಾರೆ ಪೊಲೀಸರು. ವಂಚನೆ, ಅಶ್ಲೀಲ ಮತ್ತು ಅಸಭ್ಯವಾಗಿ ನಡೆದುಕೊಂಡಿರುವುದು, ಮಹಿಳೆಯರನ್ನು ಅಪಮಾನಿಸುವ ಉದ್ದೇಶದ ಭಂಗಿಗಳನ್ನು ಪ್ರದರ್ಶಿಸಿರುವುದು, ಅಡ್ಡಗಟ್ಟಿರುವುದು, ಕ್ರಿಮಿನಲ್ ಸಂಚು.. ಹೀಗೆ ಏನೆಲ್ಲ ಸಾಧ್ಯವೋ ಹಾಗೆಲ್ಲ ದೂರು ಕೊಟ್ಟು ಈಗ ಎಫ್‌ಐಆರ್ ಕೂಡಾ ದಾಖಲಾಗಿದೆ.
ಅವಳು ಅವನ ಗರ್ಲ್‌ಫ್ರೆಂಡ್!
ಹಾಗಂತ ಇದು ಗುರು ಹಿರಿಯರಿದ್ದು ನಿಶ್ಚಯಿಸಿದ ಮದುವೆ ಏನೂ ಅಲ್ಲ. ೨೯ ವರ್ಷದ ಶಾಸಕ ವಿಜಯ ಶಂಕರ ದಾಸ್ ಕಳೆದ ಮೂರು ವರ್ಷಗಳಿಂದ ಈ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಮದುವೆ ಆಗ್ತೇನೆ ಅಗ್ತೇನೆ ಅಂತ ಆಗಾಗ ಸತಾಯಿಸುತ್ತಿದ್ದ ಅನಿಸುತ್ತದೆ. ಕೊನೆಗೊಂದು ದಿನ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಕಳೆದ ಮೇ ೧೭ಕ್ಕೆ ಅವನನ್ನೂ ಕರೆದುಕೊಂಡು ಹೋಗಿ ನೋಂದಣಿ ಕಚೇರಿಗೆ ಮಾಹಿತಿ ಕೊಟ್ಟು ಬಂದಿದ್ದಾರೆ. ಅಲ್ಲಿನ ನೋಟಿಸ್ ಬೋರ್ಡಲ್ಲಿ ಇವರಿಬ್ಬರ ಚಿತ್ರ ಹಾಕಿ, ಯಾರದ್ದಾದರೂ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು ಎಂದಿದ್ದಾರೆ. ಯಾರೂ ಆಕ್ಷೇಪ ಮಾಡಿಲ್ಲ!
ಸರಿಯಾಗಿ ಒಂದು ತಿಂಗಳ ಬಳಿಕ ಜೂನ್ 17ರಂದು ನೋಂದಣಿ ಕಚೇರಿಯಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾಗುವುದು ಎಂದು ತೀರ್ಮಾನಿಸಲಾಗಿದೆ. ಬಹುಶಃ ದಾಸ್ ಕೂಡಾ ಹೂಂ ಅಂದಿದ್ದಾನೆ. ಅಂತೆಯೇ ಹುಡುಗಿ ಆವತ್ತು ಅಲ್ಲಿಗೆ ಬಂದು ತಲುಪಿದ್ದಾಳೆ. ನೋಡಿದರೆ ದಾಸ್ ನಾಪತ್ತೆ!
ಯಾಕೆ ಹೋಗಿಲ್ಲ ಅಂದರೆ…
ಹುಡುಗಿ ಫೋನ್ ಮಾಡಿದರೆ ಶಾಸಕ ಎತ್ತೇ ಇಲ್ಲ. ಹಾಗಂತ ಒಬ್ಬ ಶಾಸಕ ಎಷ್ಟು ದಿನ ತಪ್ಪಿಸಿಕೊಳ್ಳಬಹುದು ಹೇಳಿ.. ಮಾಧ್ಯಮದವರ ಕೈಗೆ ಸಿಕ್ಕಿದಾಗ ಕೇಳೇ ಬಿಟ್ರು. ಆಗ ಅವನು: ಅಯ್ಯೋ ಹೌದಾ, ಜೂನ್ 17ಕ್ಕಾ? ನನ್ನ ಮದುವೆನಾ? ನಂಗೆ ಯಾರೂ ಹೇಳೇ ಇಲ್ಲ. ಆವತ್ತು ಯಾರೂ ನೆನಪು ಮಾಡ್ಲೇ ಇಲ್ಲ ಅಂತ- ಬೊಗಳೆ ಬಿಟ್ಟಿದ್ದಾನೆ.
ಅದು ಸರಿ, ಈ ಸಾರಿ ಗೊತ್ತಾಗಿಲ್ಲ. ಬಿಟ್ ಬಿಡೋಣ.. ಯಾವಾಗ ಮದುವೆ ಆಗ್ತೀರಾ? ಅಂತ ಕೇಳಿದ್ರೆ.. ʻʻನಾನು ಮದುವೆ ಆಗಲ್ಲ ಅಂತ ಯಾವತ್ತಾದರೂ ಹೇಳಿದ್ದೇನಾ? ಖಂಡಿತ ಆಗ್ತೀನಿ. ಇನ್ನೂ ಒಂದು ತಿಂಗಳ ಟೈಮಿದೆ. ಮಾಡ್ಕೊಳ್ತೀನಿʼ ಅಂದಿದ್ದಾನೆ.
ಈ ನಡುವೆ, ಹುಡುಗಿ ಹೇಳೋದೇ ಬೇರೆ. ʻʻನಾವು ಮೂರು ವರ್ಷದಿಂದ ಲವ್ ಮಾಡ್ತಾ ಇದ್ದೇವೆ. ನನ್ನನ್ನು ಮದುವೆ ಆಗ್ತೇನೆ ಅಂತ ಭರವಸೆ ಕೊಟ್ಟು ಮೋಸ ಮಾಡಲು ನೋಡ್ತಾ ಇದಾರೆ. ಅವರ ಸಹೋದರರು ಮತ್ತು ಕುಟುಂಬದ ಕೆಲವು ಸದಸ್ಯರು ನನಗೆ ಬೆದರಿಕೆ ಹಾಕ್ತಾ ಇದಾರೆʼʼ ಅಂದಿದ್ದಾಳೆ.
ವಿಜಯ್ ಶಂಕರ್ ದಾಸ್ 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಫ್ರೆಶ್ ಎಂಎಲ್‌ಎ. ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾಗಲೇ ರಾಜಕೀಯ ಪ್ರವೇಶ ಮಾಡಿದ್ದ. ಸಾಮಾಜಿಕ ಸೇವೆಗೆ ಆಕರ್ಷಿತಳಾಗಿ ಲವ್ ಮಾಡಿದವಳು ಈ ಹುಡುಗಿ. ಮುಂಬಯಿ ವಿವಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ದಾಸ್ ಖದರು ಎಂಎಲ್‌ಎ ಆದಮೇಲೆ ಬದಲಾಗಿದೆ. ಅದರೆ, ಹುಡುಗಿ ಮಾತ್ರ ಬದಲಾಗಿಲ್ಲ. ಮದುವೆ ಹಠಕ್ಕೆ ಬಿದ್ದಿದ್ದಾಳೆ. ತಪ್ಪಿಸಿಕೊಳ್ಳಲು ಬೇರೆ ಬೇರೆ ದಾರಿ ಹುಡುಕುತ್ತಿದ್ದಾನೆ ದಾಸ್. ಈಗ ವಂಚನೆ, ಮೋಸ, ಅಶ್ಲೀಲ ವರ್ತನೆ ಸೇರಿ ಹತ್ತಾರು ಸೆಕ್ಷನ್ ಹಾಕಿದ್ದರಿಂದ ಅವರಿಬ್ಬರ ಸಂಬಂಧ ನಿಜಕ್ಕೂ ಹೀಗೇ ಮುಂದುವರಿಯುತ್ತದಾ? ಅವನು ಅವಳನ್ನು ಮದುವೆ ಆಗುತ್ತಾನಾ ಎನ್ನುವುದು ಮುಂದಿನ ರಿಜಿಸ್ಟ್ರೇಷನ್‌ಗೆ ನಿಗದಿಯಾಗಲಿರುವ ಮುಂದಿನ ದಿನಾಂಕದಂದು ಗೊತ್ತಾಗಲಿದೆ.
ಇದನ್ನೂ ಓದಿ| ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!