Site icon Vistara News

ರಾಹುಲ್‌ ಗಾಂಧಿ ಸೋಷಿಯಲ್‌ ಮೀಡಿಯಾ ಖಾತೆ ರದ್ದುಗೊಳಿಸಲು ಬಿಜೆಪಿ ಆಗ್ರಹ; ಏಕೆ ವಿವಾದ?

rahul gandhi new

rahul gandhi new

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯ (Rajasthan assembly polls) ದಿನದಂದು (ನವೆಂಬರ್‌ 25) ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಕ್ಷದ ಬಗ್ಗೆ ಪ್ರಚಾರ ಮಾಡುವ ಪೋಸ್ಟ್ ಹಂಚುವ ಮೂಲಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ಹೀಗಾಗಿ ರಾಹುಲ್‌ ಗಾಂಧಿ ಅವರ ಸೋಷಿಯಲ್‌ ಮೀಡಿಯಾ ಖಾತೆಯನ್ನು ಅಮಾನತುಗೊಳಿಸುವಂತೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗ (Election Commission of India-ECI)ವನ್ನು ಒತ್ತಾಯಿಸಿದೆ.

ರಾಹುಲ್‌ ಗಾಂಧಿ ಪೋಸ್ಟ್‌ನಲ್ಲಿ ಏನಿದೆ?

ರಾಹುಲ್ ಗಾಂಧಿ ಶನಿವಾರ ಎಕ್ಸ್‌ನಲ್ಲಿ, “ರಾಜಸ್ಥಾನವು ಉಚಿತ ಚಿಕಿತ್ಸೆಯನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಅಗ್ಗದ ಗ್ಯಾಸ್ ಸಿಲಿಂಡರ್‌ಗಳನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಬಡ್ಡಿರಹಿತ ಕೃಷಿ ಸಾಲವನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಇಂಗ್ಲಿಷ್ ಶಿಕ್ಷಣವನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಒಪಿಎಸ್ ಅನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಜಾತಿ ಜನಗಣತಿಯನ್ನು ಆಯ್ಕೆ ಮಾಡುತ್ತದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ. ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿ” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದರು.

ಬಿಜೆಪಿಯಿಂದ ಪತ್ರ

ಯಾವುದೇ ರೀತಿಯ ಪ್ರಚಾರವನ್ನು ನಿಷೇಧಿಸುವ 48 ಗಂಟೆಗಳ ‘ಮೌನ ಅವಧಿ’ಯನ್ನು ರಾಹುಲ್ ಗಾಂಧಿ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಕಾಂಗ್ರೆಸ್ ನಾಯಕ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದೆ. ʼಮತದಾನದ ದಿನಾಂಕದಂದು ಅಂದರೆ ನವೆಂಬರ್ 25ರಂದು ಇಂತಹ ಸಂದೇಶವನ್ನು ಪೋಸ್ಟ್ ಮಾಡುವುದು ಸೆಕ್ಷನ್ 126 ಜನ ಪ್ರಾತಿನಿಧ್ಯ ಕಾಯ್ದೆ 1951ರ ಅಡಿಯಲ್ಲಿ ಅಪರಾಧ ಎಸಗಿದಂತಾಗುತ್ತದೆʼ ಎಂದು ಬಿಜೆಪಿ ಹೇಳಿದೆ. ʼಸೆಕ್ಷನ್ 126ರ ನಿಬಂಧನೆಗಳನ್ನು ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದುʼ ಎಂದು ಬಿಜೆಪಿ ಬರೆದುಕೊಂಡಿದೆ.

ನಿಯಮ ಏನು ಹೇಳುತ್ತದೆ?

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 126(1)(ಬಿ) ಪ್ರಕಾರ, ಯಾವುದೇ ವ್ಯಕ್ತಿಯು ಮತಗಟ್ಟೆಯಲ್ಲಿ ಛಾಯಾಗ್ರಹಣ, ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಆ ಮತಗಟ್ಟೆ ಪ್ರದೇಶದಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಚುನಾವಣೆಗೆ ನಿಗದಿಪಡಿಸಿದ ಸಮಯದಿಂದ ಕೊನೆಗೊಳ್ಳುವ ನಲವತ್ತೆಂಟು ಗಂಟೆಗಳ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸುವಂತಿಲ್ಲ. ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತದಾನವು ನವೆಂಬರ್‌ 25ರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತೊಂದು ಅವಧಿಯ ಮೇಲೆ ಕಣ್ಣಿಟ್ಟಿದ್ದರೆ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಅವಲಂಬಿಸಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.

2018ರಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 73 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಬಿಎಸ್‌ಪಿ ಶಾಸಕರು ಮತ್ತು ಸ್ವತಂತ್ರರ ಬೆಂಬಲದೊಂದಿಗೆ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version