Site icon Vistara News

ಮುಂಬಯಿ ಏರ್‌ಪೋರ್ಟ್‌ನಲ್ಲಿ ಜುಲೈ 3ಕ್ಕೆ ಜಮಾವಣೆಗೊಳ್ಳಲು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಕರೆ

maharastra bjp

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳೆಯದಲ್ಲಿ ಚಟುವಟಿಕೆಗಳು ಚುರುಕಾಗಿದ್ದು, ಜುಲೈ ೩ರ ಭಾನುವಾರ ಮುಂಬಯಿ ಏರ್‌ಪೋರ್ಟ್‌ನಲ್ಲಿ ಜಮಾವಣೆಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದೆ.

ಶಿವಸೇನಾದ ರೆಬೆಲ್‌ ಶಾಸಕರು ಗುವಾಹಟಿಯಿಂದ ಮುಂಬಯಿಗೆ ಜುಲೈ ೩ರಂದು ಆಗಮಿಸಲಿದ್ದಾರೆ. ಈ ಸಂದರ್ಭ ಯಾವುದೇ ಅಹಿತಕರ ಘಟನೆ, ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೆಬೆಲ್‌ ಶಾಸಕರ ವಿರುದ್ಧ ಶಿವಸೇನಾ ನಾಯಕರು ಪ್ರತೀಕಾರ ತೀರಿಸುವ ರೀತಿಯಲ್ಲಿ ಬಳಸಿರುವ ಭಾಷೆಯನ್ನು ಗಮನಿಸಿರುವ ಬಿಜೆಪಿ, ಯಾವುದೇ ಪರಿಸ್ಥಿತಿ ಎದುರಿಸಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುತ್ತಿದೆ.

ಬಿಜೆಪಿಯ ೧೬ ಶಾಸಕರು, ೫ ಎಂಎಲ್‌ಸಿಗಳು ಮತ್ತು ಸಂಸದರು ಮುಂಬಯಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದು ತಳಮಟ್ಟದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ರಾಜಕೀಯ ಬೆಳವಣಿಗೆ ಆದರೂ ಎದುರಿಸಲು ಪಕ್ಷ ಸಿದ್ಧವಾಗುತ್ತಿದೆ.

ಮುಂಬಯಿ ಮಹಾನಗರದ ೩೬ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಪದಾಧಿಕಾರಿಗಳ ಸಭೆ ನಡೆದಿದೆ. ಪಕ್ಷದ ಶಾಸಕರು ಇಲ್ಲದಿರುವ ಕ್ಷೇತ್ರಗಳಲ್ಲಿ ಎಂಎಲ್‌ಸಿಗಳು ಮತ್ತು ಸಂಸದರು ಸಭೆಗಳ ನೇತೃತ್ವ ವಹಿಸಿದ್ದಾರೆ. ಯಾವುದಾದರೂ ಹಿಂಸಾಚಾರ ಏರ್ಪಟ್ಟರೆ, ಅದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಇತರ ನಾಯಕರೊಡನೆ ವ್ಯಾಪಕ ಸಮಾಲೋಚನೆ ನಡೆಸುತ್ತಿದ್ದಾರೆ.

ರಾಜ್‌ ಠಾಕ್ರೆ ಜತೆ ಶಿಂಧೆ ಮಾತುಕತೆ

ಈ ನಡುವೆ ರೆಬೆಲ್‌ ಶಾಸಕರ ನಾಯಕ ಏಕನಾಥ್‌ ಶಿಂಧೆ ಅವರು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಜತೆ ಸಮಾಲೋಚಿಸಿದ್ದಾರೆ.

Exit mobile version