2024ರ ಲೋಕಸಭೆ ಚುನಾವಣೆ (2024 Lok Sabha Election)ಯ ಸಲುವಾಗಿ ಒಗ್ಗಟ್ಟಾಗಿರುವ ಪ್ರತಿಪಕ್ಷಗಳ ನಾಯಕರೆಲ್ಲ ಇಂದು ಬಿಹಾರದ ಪಾಟ್ನಾದಲ್ಲಿ ಸಭೆ (Opposition Meet) ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈಗಾಗಲೇ ಪಾಟ್ನಾ ತಲುಪಿದ್ದಾರೆ. ಹೀಗೆ ರಾಹುಲ್ ಗಾಂಧಿಯವರು ಪಾಟ್ನಾ ತಲುಪಿರುತ್ತಿರುವ ಬೆನ್ನಲ್ಲೇ ಬಿಜೆಪಿ ಕಚೇರಿ ಎದುರು ದೊಡ್ಡದಾದ ಬ್ಯಾನರ್ ಹಾಕಲಾಗಿದ್ದು, ‘ರಾಹುಲ್ ಗಾಂಧಿ (Congress leader Rahul Gandhi) ನಿಜ ಜೀವನದ ದೇವದಾಸ್’ ಎಂದು ಟೀಕಿಸಲಾಗಿದೆ.
ಬ್ಯಾನರ್ನ ಮೇಲ್ಭಾಗದಲ್ಲಿ ಶಾರುಖ್ ಖಾನ್ ಫೋಟೋ ಹಾಕಿ ರೀಲ್ ಲೈಫ್ನ ದೇವದಾಸ್ ಎಂದು ಬರೆಯಲಾಗಿದೆ. ಹಾಗೇ, ಕೆಳಗೆ ರಾಹುಲ್ ಗಾಂಧಿ ಫೋಟೋ ಹಾಕಿ ರಿಯಲ್ ಲೈಫ್ನ ದೇವದಾಸ್ (ನೈಜ ಜೀವನದ ದೇವದಾಸ್) ಎಂದು ಉಲ್ಲೇಖಿಸಲಾಗಿದೆ. ದೇವದಾಸ್ ಸಿನಿಮಾದಲ್ಲಿ ನಟ ಶಾರುಖ್ ಖಾನ್ ಅವರು ತಮ್ಮ ಸ್ನೇಹಿತನಿಗೆ ಹೇಳುವ ಒಂದು ಡೈಲಾಗ್ ಇದೆ. ‘ಹಿರಿಯರೊಬ್ಬರು ಹೇಳಿದರು, ಈ ಹಳ್ಳಿಯನ್ನೇ ಬಿಟ್ಟು ಹೋಗು ಎಂದು. ಕುಟುಂಬದವರು ಬಂದು ಪಾರುವನ್ನು ಬಿಟ್ಟುಬಿಡು ಎಂದರು. ಪಾರು ಹೇಳುತ್ತಾಳೆ ಕುಡಿಯುವುದನ್ನು ಬಿಡು ಎಂದು, ನೀನು ಇವತ್ತು ಬಂದು, ಈ ನಗರವನ್ನೇ ಬಿಟ್ಟು ಹೋಗು ಎನ್ನುತ್ತಿದ್ದೀಯಾ. ಇನ್ನೊಂದು ದಿನ ಎಲ್ಲರೂ ಸೇರಿ ‘ಈ ಪ್ರಪಂಚವನ್ನೇ ಬಿಟ್ಟು ಹೋಗು’ ಎನ್ನುತ್ತಾರೆ ಎಂಬುದು ಆ ಡೈಲಾಗ್ನ ಸಾರಾಂಶ.
ಈಗ ಬಿಜೆಪಿ ಮಾಡಿರುವ ಬ್ಯಾನರ್ನಲ್ಲಿ ರಾಹುಲ್ ಗಾಂಧಿ ಫೋಟೋ ಹಾಕಿ ಇದೇ ಮಾದರಿಯ ಡೈಲಾಗ್ನ್ನು ಬರೆಯಲಾಗಿದೆ. ‘ರಾಹುಲ್ ಗಾಂಧಿ ಬಳಿ ಮಮತಾ ಬ್ಯಾನರ್ಜಿ ಬಂಗಾಳವನ್ನು ಬಿಟ್ಟು ಹೋಗು ಎನ್ನುತ್ತಾರೆ. ದೆಹಲಿ ಮತ್ತು ಪಂಜಾಬ್ನ್ನು ಬಿಟ್ಟು ಹೋಗೆಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿದ್ದಾರೆ. ಉತ್ತರ ಪ್ರದೇಶವನ್ನು ತೊರೆಯಿರಿ ಎಂದು ಅಖಿಲೇಶ್ ಯಾದವ್ ಹೇಳುತ್ತಿದ್ದಾರೆ ಹಾಗೇ, ತಮಿಳುನಾಡಿನಲ್ಲೂ ನಿಮ್ಮ ಅವಶ್ಯಕತೆ ಇಲ್ಲವೆಂದು ಎಂ.ಕೆ.ಸ್ಟಾಲಿನ್ ಹೇಳುತ್ತಿದ್ದಾರೆ. ಹೀಗೆ ಇವರೆಲ್ಲರೂ ಒಟ್ಟಾಗಿ ಸೇರಿಕೊಂಡು ರಾಹುಲ್ ಗಾಂಧಿ ಬಳಿ ‘ರಾಜಕೀಯವನ್ನೇ ತೊರೆದುಬಿಡಿ’ ಎಂದು ಹೇಳುವ ದಿನ ದೂರವಿಲ್ಲ’ ಎಂದು ವ್ಯಂಗ್ಯ ಮಾಡಿದೆ.
ಇದನ್ನೂ ಓದಿ: Opposition Meet: ಪಾಟ್ನಾದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು; ‘ಫೋಟೋ ಸೆಷನ್’ ಎಂದು ಕಾಲೆಳೆದ ಅಮಿತ್ ಶಾ
ಇಂದು ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಾಲ್ಗೊಂಡಿದ್ದಾರೆ. ಈ ಸಭೆ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಮಲ್ಲಿಕಾರ್ಜುನ್ ಖರ್ಗೆ ‘ಪ್ರತಿಪಕ್ಷಗಳು ಒಗ್ಗಟ್ಟಾಗಿ, ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಸೆಯುವುದೇ ನಮ್ಮ ಅಜೆಂಡಾವಾಗಿದೆ. ಬಿಜೆಪಿಯನ್ನು ಸೋಲಿಸಲು ನಾವೆಲ್ಲರೂ ಒಂದಾಗುತ್ತಿದ್ದೇವೆ’ ಎಂದು ಹೇಳಿದ್ದರು.
#WATCH | Posters taking a jibe at the Opposition unity, portraying Congress leader Rahul Gandhi as 'Devdas of real life', put up outside the BJP office in Patna, Bihar. pic.twitter.com/23eHdw8D9o
— ANI (@ANI) June 23, 2023