Site icon Vistara News

BJP Executive: ಪ್ರಧಾನಿ ಸ್ವಾಗತಿಸಲು ಬಾರದ ಕೆಸಿಆರ್‌: ಎಷ್ಟು ಕಾಲ ಅಡಗ್ತಾರೆ ನೋಡೋಣ ಎಂದ ಬಿಜೆಪಿ

ಹೈದರಾಬಾದ್‌: ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಅವರನ್ನು ಸ್ವಾಗತಿಸಲು ಬಾರದೆ ಶಿಷ್ಟಾಚಾರ ಮುರಿದ ತೆಲಂಗಾಣ ಮುಖ್ಯಮಂತ್ರಿ, ಟಿಆರ್‌ಎಸ್‌ ನಾಯಕ ಕೆ.ಚಂದ್ರಶೇಖರ್‌ ರಾವ್‌ ಅವರ ಮೇಲೆ ಬಿಜೆಪಿ ಗರಂ ಆಗಿದೆ. ಬಿಜೆಪಿಯ ಹಲವು ನಾಯಕರು ಕೆ.ಸಿ.ಆರ್‌. ವಿರುದ್ಧ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದು, ಅವರು ಎಷ್ಟು ಕಾಲ ಅಡಗುತ್ತಾರೆ ಎಂದು ನೋಡೋಣ ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸುವುದು ಶಿಷ್ಟಾಚಾರ. ಆದರೆ, ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಪದೇಪದೆ ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ. ಅವರು ಪ್ರಧಾನಿ ಅವರನ್ನು ಎದುರ್ಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, ʻʻಸಹಕಾರ ಒಕ್ಕೂಟ ವ್ಯವಸ್ಥೆ ಎನ್ನುವುದು ನಮ್ಮ ಪ್ರಜಾಪ್ರಭುತ್ವದ ಅಡಿಗಲ್ಲು. ತೆಲಂಗಾಣ ಮುಖ್ಯಮಂತ್ರಿಗಳು ಮತ್ತೊಮ್ಮೆ ಉದ್ದೇಶಪೂರ್ವಕವಾಗಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ. ಆ ಮೂಲಕ ಅವರು ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳಿಗೇ ಅಪಮಾನ ಮಾಡಿದ್ದಾರೆ. ಕೆ.ಚಂದ್ರಶೇಖರ ರಾವ್‌ ಅವರು ಅಡಗಿಕೊಳ್ಳಬಹುದು. ಆದರೆ, ಅವರ ಭ್ರಷ್ಟ ರಾಜಕೀಯವನ್ನು ಹೆಚ್ಚು ಕಾಲ ಅಡಗಿಸಿಟ್ಟುಕೊಳ್ಳಲಾಗದುʼʼ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕೆ.ಸಿ.ಆರ್‌. ಸರಕಾರದ ಪರವಾಗಿ ಇದ್ದದ್ದು ಒಬ್ಬ ಮಂತ್ರಿ ಮಾತ್ರ. ರಾಜ್ಯಪಾಲರಾದ ತಮಿಳ್‌ ಸಾಯಿ ಸೌಂದರರಾಜನ್‌ ಅವರು ಆಗಮಿಸಿದ್ದರು.

ಶಿಷ್ಟಾಚಾರವನ್ನು ಮುರಿಯುವುದು ಸರಿಯಲ್ಲ. ನಾವು ಪ್ರಧಾನಿಯನ್ನು ಗೌರವಿಸಬೇಕು. ಅವರು ದೇಶದ ಪ್ರಧಾನಿ. ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲ. ಕೆ.ಸಿ.ಆರ್‌.ಗೆ ಪ್ರಧಾನಿಯನ್ನು ಎದುರಿಸಲು ಹೆದರಿಕೆ ಎಂದು ಬಿಜೆಪಿ ಎಂಎಲ್‌ಸಿ ಆಗಿರುವ ಎನ್‌. ರಾಮಚಂದರ್‌ ಹೇಳಿದ್ದಾರೆ.

ಇದನ್ನೂ ಓದಿ| ಪ್ರಧಾನಿ ಸ್ವಾಗತಕ್ಕೆ ತೆಲಂಗಾಣ ಸಿಎಂ ಕೆಸಿಆರ್‌ ಹೋಗೋದಿಲ್ಲ; 6 ತಿಂಗಳಲ್ಲಿ 3ನೇ ಬಾರಿ ಶಿಷ್ಟಾಚಾರ ಉಲ್ಲಂಘನೆ

Exit mobile version