ನವದೆಹಲಿ: ಒಂಭತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮಂಗಳವಾರ ಅಂತ್ಯವಾಗಲಿದೆ. ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದು, ಇಂದಿನ ಹೈಲೈಟ್ ಆಗಲಿದೆ(BJP Executive Meeting).
ಕಾರ್ಯಕಾರಿಣಿ ವೇಳೆ ಅವರು ಚುನಾವಣೆಗಳನ್ನು ಎದುರಿಸಲಿರುವ ರಾಜ್ಯಗಳ ನಾಯಕರಿಗೆ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಸೂಚಿಸುವ ಸಾಧ್ಯತೆಗಳಿವೆ. ಮತದಾರರನ್ನು ತಲುಪುವ ಗುರುತರ ಜವಾಬ್ದಾರಿಯನ್ನು ಅವರ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಲಿದ್ದಾರೆ.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ವಿವಿಧ ರಾಜ್ಯಗಳ ನಾಯಕರು ಸಲ್ಲಿಸಿರುವ ವರದಿಗಳನ್ನು ಸ್ವೀಕರಿಸಿದ್ದು, ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಕರ್ನಾಟಕ ರಾಜಕೀಯ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದು, ಬಿಜೆಪಿ ಸ್ವಂತವಾಗಿ 106 ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ.
ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಮಂಗಳವಾರ ಬಿಜೆಪಿಯ ವಿವಿಧ ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಗಳಿವೆ. ವಿಶೇಷವಾಗಿ ಆರ್ಥಿಕ ಮತ್ತು ವಿದೇಶಾಂಗ ವ್ಯವಹಾರಗಳ ಕುರಿತು ಕಾರ್ಯಕಾರಿಣಿಯಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗುವುದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | BJP Meeting | ಬಿಜೆಪಿ ಕಾರ್ಯಕಾರಿಣಿ; 2024ರ ಲೋಕಸಭೆ, 9 ವಿಧಾನಸಭೆ ಚುನಾವಣೆಗೆ ಪಕ್ಷ ರಣತಂತ್ರ, ರವಿಶಂಕರ್ ಪ್ರಸಾದ್ ಮಾಹಿತಿ