ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Election 2022) ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವ ಬಿಜೆಪಿಯು ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹಾರ್ದಿಕ್ ಪಟೇಲ್, ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರು ಸೇರಿ 160 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅದರಲ್ಲೂ, ಅಕ್ಟೋಬರ್ 30ರಂದು ಮೊರ್ಬಿ ಸೇತುವೆ ಕುಸಿದಾಗ ನದಿಗೆ ಹಾರಿ ಜನರ ಪ್ರಾಣ ಉಳಿಸಿದ ವ್ಯಕ್ತಿಗೂ ಬಿಜೆಪಿ ಟಿಕೆಟ್ ನೀಡಿದ್ದು ವಿಶೇಷವಾಗಿದೆ.
ಹೌದು, ಮಾಜಿ ಶಾಸಕ ಕಾಂತಿಲಾಲ್ ಅಮೃತಿಯ (Kantilal Amrutiya) ಅವರು ಅಕ್ಟೋಬರ್ 30ರಂದು ಮಚ್ಚು ನದಿಗೆ ನಿರ್ಮಿಸಿರುವ ತೂಗುಸೇತುವೆ ಕುಸಿದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನದಿಗೆ ಹಾರಿ ಜನರನ್ನು ರಕ್ಷಿಸಿದ್ದರು. ಇದಾದ ಬಳಿಕ ಅವರ ಸಾಹಸ ಹಾಗೂ ಜನರ ಪರ ಹೊಂದಿರುವ ನಿಲುವನ್ನು ಜನ ಮೆಚ್ಚಿದ್ದರು. ಸಾಮಾಜಿಕ ಜಾಲತಾಣದಲ್ಲೂ ಅವರ ಬಗ್ಗೆ ಶ್ಲಾಘನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಮೊರ್ಬಿ ವಿಧಾನಸಭೆ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ.
ಮೊರ್ಬಿ ಸೇತುವೆ ಕುಸಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ದುರಂತದಲ್ಲಿ 130ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು, ಖುದ್ದು ಮೋದಿ ಅವರೇ ಸೇತುವೆ ಕುಸಿತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ದುರಸ್ತಿಯಾದ ಒಂದೇ ವಾರದಲ್ಲಿ ಸೇತುವೆ ಕುಸಿದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದರ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | Gujarat Election | ಹಾರ್ದಿಕ್ ಪಟೇಲ್, ಕ್ರಿಕೆಟರ್ ಜಡೇಜಾ ಪತ್ನಿಗೆ ಟಿಕೆಟ್, ಬಿಜೆಪಿ ಅಭ್ಯರ್ಥಿಗಳ ಫಸ್ಟ್ ಲಿಸ್ಟ್!