Site icon Vistara News

Rajya Sabha Election: ಜೆ.ಪಿ.ನಡ್ಡಾ, ಅಶೋಕ್‌ ಚೌಹಾಣ್‌ಗೆ ರಾಜ್ಯಸಭೆ ಬಿಜೆಪಿ ಟಿಕೆಟ್ ಘೋಷಣೆ

JP Nadda

BJP fields Nadda for Rajya Sabha polls from Gujarat, Congress turncoat Ashok Chavan from Maharashtra

ನವದೆಹಲಿ: ರಾಜ್ಯಸಭೆ ಚುನಾವಣೆ (Rajya Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯು ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಗುಜರಾತ್‌ನಿಂದ ಹಾಗೂ ಮಂಗಳವಾರವಷ್ಟೇ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಅವರನ್ನು ಮಹಾರಾಷ್ಟ್ರದಿಂದ ಕಣಕ್ಕಿಳಿಸಿದೆ. ಹೊಸ ಪಟ್ಟಿಯಲ್ಲಿ ಗುಜರಾತ್‌ನ ನಾಲ್ವರು ಹಾಗೂ ಮಹಾರಾಷ್ಟ್ರದ ಮೂವರಿಗೆ ಬಿಜೆಪಿಯು ಟಿಕೆಟ್‌ ಘೋಷಿಸಿದೆ.

ಮಹಾರಾಷ್ಟ್ರದಿಂದ ಅಶೋಕ್‌ ಚೌಹಾಣ್‌, ಮೇಧಾ ಕುಲಕರ್ಣಿ, ಅಜಿತ್‌ ಗೊಪ್ಚಾಡೆ ಅವರಿಗೆ ಟಿಕೆಟ್‌ ನೀಡಲಾಗಿದೆ. ಗುಜರಾತ್‌ನಿಂದ ಜೆ.ಪಿ.ನಡ್ಡಾ, ಗೋವಿಂದಭಾಯಿ ಧೋಲಾಕಿಯಾ, ಮಯಾಂಕ್‌ಭಾಯಿ ನಾಯಕ್‌ ಹಾಗೂ ಜಶ್ವಂತ್‌ ಸಿಂಗ್‌ ಸಲಾಂ ಸಿಂಗ್‌ ಪಾರ್ಮರ್‌ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಸ್ಪರ್ಧಿಸುತ್ತಿದ್ದು, ಈಗಾಗಲೇ ಜೈಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಬುಧವಾರ ಮೊದಲು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಇಬ್ಬರು ಸಚಿವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಒಡಿಶಾ ಹಾಗೂ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್.‌ ಮುರುಗನ್‌ ಅವರನ್ನು ಬಿಜೆಪಿಯು ಮಧ್ಯಪ್ರದೇಶದಿಂದ ಕಣಕ್ಕಿಳಿಸಿದೆ. ರಾಜ್ಯಸಭೆ ಸದಸ್ಯರಾಗಿರುವ ಕೇಂದ್ರ ಸಚಿವರಿಗೆ ಬಿಜೆಪಿಯು ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ರಾಜೀವ್‌ ಚಂದ್ರಶೇಖರ್‌ ಅವರಿಗೆ ನೀಡದ ಕಾರಣ ಇಂತಹ ಮಾತುಗಳು ಕೇಳಿಬಂದಿದ್ದವು. ಆದರೀಗ, ಇಬ್ಬರು ಕೇಂದ್ರ ಸಚಿವರಿಗೆ ಬಿಜೆಪಿಯು ರಾಜ್ಯಸಭೆ ಟಿಕೆಟ್‌ ನೀಡಿದೆ. ಇನ್ನು ಮಧ್ಯಪ್ರದೇಶದಿಂದ ಎಲ್‌.ಮುರುಗನ್ ಜತೆಗೆ ಉಮೇಶ್‌ನಾಥ್‌ ಮಹಾರಾಜ್‌, ಮಾಯಾ ನರೋಲಿಯಾ, ಬಾನ್ಸಿಲಾಲ್‌ ಗುರ್ಜಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆ ಕಣಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿ ಯಾರಿಗೆ?

ಫೆಬ್ರವರಿ 27ರಂದು ಚುನಾವಣೆ

ಒಟ್ಟು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು ತೀರ್ಮಾನಿಸಿದೆ. ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version