Site icon Vistara News

ಉದ್ಧವ್‌ ಠಾಕ್ರೆ ಮನೆ ಎದುರು ಹನುಮಾನ್‌ ಚಾಲೀಸಾ ಪಠಿಸಿದ್ದ ನವನೀತ್ ರಾಣಾಗೆ ಬಿಜೆಪಿ ಟಿಕೆಟ್!

Navneet Kaur Rana

BJP fields Navneet Rana from Maharashtra's Amravati Lok Sabha seat

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವ ಬಿಜೆಪಿಯು ಈಗ ಏಳನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಸೇರಿ ಇಬ್ಬರು ಅಭ್ಯರ್ಥಿಗಳಿಗೆ ಮಾತ್ರ ಏಳನೇ ಪಟ್ಟಿಯಲ್ಲಿ (BJP Candidates List) ಟಿಕೆಟ್‌ ಘೋಷಿಸಿದೆ. ಅದರಲ್ಲೂ, ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ಪಕ್ಷೇತರ ಸಂಸದೆಯಾಗಿದ್ದ, ಆಗ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ನಿವಾಸದ ಎದುರು ಹನುಮಾನ್‌ ಚಾಲೀಸಾ (Hanuman Chalisa Row) ಪಠಿಸಿ ಸುದ್ದಿಯಾಗಿದ್ದ ನವನೀತ್‌ ರಾಣಾ (Navneet Rana) ಅವರನ್ನು ಬಿಜೆಪಿಯು ಅಮರಾವತಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ನವನೀತ್‌ ಕೌರ್‌ ರಾಣಾ ಅವರನ್ನು ಅಮರಾವತಿ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಬಿಜೆಪಿಯು ಶಿವಸೇನೆಗೆ (ಉದ್ಧವ್‌ ಠಾಕ್ರೆ ಬಣ) ತಪರಾಕಿ ನೀಡಿದೆ. 2022ರ ಏಪ್ರಿಲ್‌ನಲ್ಲಿ ನವನೀತ್‌ ಕೌರ್‌ ರಾಣಾ ಹಾಗೂ ಇವರ ಪತಿ (ಬದ್ನೇರಾ ಕ್ಷೇತ್ರದ ಪಕ್ಷೇತರ ಶಾಸಕ) ರವಿ ರಾಣಾ ಅವರು ಉದ್ಧವ್‌ ಠಾಕ್ರೆ ಖಾಸಗಿ ನಿವಾಸವಾದ ಮಾತೋಶ್ರಿ ಎದುರು ಹನುಮಾನ್‌ ಚಾಲೀಸಾ ಪಠಿಸಿದ್ದರು. ಹಾಗಾಗಿ, ದಂಪತಿಯನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು. ಈಗ ನವನೀತ್‌ ಕೌರ್‌ ರಾಣಾ ಅವರಿಗೆ ಬಿಜೆಪಿಯು ಟಿಕೆಟ್‌ ನೀಡಿರುವುದು ರಣತಂತ್ರ ಎಂದೇ ಹೇಳಲಾಗುತ್ತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವನೀತ್‌ ರಾಣಾ ಅವರು ಕೇಂದ್ರದ ಮಾಜಿ ಸಚಿವ, ಶಿವಸೇನೆಯ ಆನಂದರಾವ್‌ ಅದ್ಸುಲ್‌ ಅವರನ್ನು ಮಣಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೇ ಕಾರಣಕ್ಕಾಗಿ, ಶಿವಸೇನೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರವಿದ್ದಾಗ ನವನೀತ್‌ ಕೌರ್‌ ರಾಣಾ ಅವರ ವಿರುದ್ಧ ಬಲ ಪ್ರಯೋಗ ಮಾಡಿತ್ತು ಎಂದು ವಿಶ್ಲೇಷಿಸಲಾಗಿತ್ತು. ಮಹಾರಾಷ್ಟ್ರದ ಅಮರಾವತಿ ಕ್ಷೇತ್ರವು ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ.

ಆಂಧ್ರಪ್ರದೇಶದ 10 ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು 10 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಧರ್ಮಾವರಂನಿಂದ ವೈ.ಸತ್ಯಕುಮಾರ್‌, ಅದೋನಿಯಿಂದ ಪಿ.ವಿ.ಪಾರ್ಥಸಾರಥಿ ಸೇರಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಹರಿಯಾಣದ ಕರ್ನಾಲ್‌ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ನಾಯಬ್‌ ಸಿಂಗ್‌ ಸೈನಿ ಅವರಿಗೆ ಟಿಕೆಟ್‌ ನೀಡಿದೆ.

ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಈ ಬಾರಿ ಹಲವು ಪ್ರಯೋಗಗಳನ್ನು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಭಿಜಿತ್‌ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಇಬ್ಬರು ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್‌ ಚೌಬೆ, ವಿ.ಕೆ. ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸಂಬಲ್ಪುರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಪಕ್ಷದ ವಕ್ತಾರ ಸಂಬಿತ್‌ ಪಾತ್ರಾ ಅವರಿಗೆ ಒಡಿಶಾದ ಪುರಿ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಸಲಾಗಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರಿಗೆ ಜಾರ್ಖಂಡ್‌ನ ಡುಮ್ಕಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version