ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಶತಾಯಗತಾಯ ಗೆಲುವು ಸಾಧಿಸಲು ಮುಂದಾಗಿರುವ ಬಿಜೆಪಿಯು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಹಿಡಿದು ಪ್ರಮುಖ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಪ್ರಣಾಳಿಕೆ ರಚಿಸುವ ದೃಷ್ಟಿಯಿಂದ ಬಿಜೆಪಿಯು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದಲ್ಲಿ ಬಿಜೆಪಿಯು ಚುನಾವಣಾ ಪ್ರಣಾಳಿಕೆ ಸಮಿತಿಯನ್ನು (BJP Election Manifesto Committee) ರಚಿಸಿದೆ. ಸಮಿತಿಯಲ್ಲಿ ಬಿಜೆಪಿಯ 27 ನಾಯಕರಿದ್ದಾರೆ.
ಸಮಿತಿಯಲ್ಲಿ ಯಾರಿದ್ದಾರೆ?
ಬಿಜೆಪಿಯ ಪ್ರಣಾಳಿಕೆ ಸಮಿತಿಗೆ ರಾಜನಾಥ್ ಸಿಂಗ್ ಅವರು ಅಧ್ಯಕ್ಷರಾಗಿದ್ದಾರೆ. ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಿತಿಯ ಸಂಚಾಲಕಿಯಾಗಿದ್ದಾರೆ. ಪಿಯೂಷ್ ಗೋಯಲ್ ಅವರು ಸಹ ಸಂಚಾಲಕರಾಗಿದ್ದಾರೆ. ಇನ್ನುಳಿದಂತೆ ಅರ್ಜುನ್ ಮುಂಡಾ, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಹಿಮಂತ ಬಿಸ್ವಾ ಶರ್ಮಾ, ಸ್ಮೃತಿ ಇರಾನಿ, ವಸುಂಧರಾ ರಾಜೆ, ರವಿಶಂಕರ್ ಪ್ರಸಾದ್, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಸೇರಿ ಹಲವರು ಸಮಿತಿಯ ಸದಸ್ಯರಾಗಿದ್ದಾರೆ.
भाजपा राष्ट्रीय अध्यक्ष श्री @JPNadda ने लोकसभा चुनाव-2024 के लिए चुनाव घोषणा-पत्र समिति का गठन किया है।
— BJP LIVE (@BJPLive) March 30, 2024
BJP National President Shri JP Nadda has announced Election Manifesto Committee for the Lok Sabha Elections – 2024. pic.twitter.com/Jxrvjemfo0
ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯ ಪ್ರಣಾಳಿಕೆಯು ಪ್ರಾಮುಖ್ಯತೆ ಪಡೆದಿದೆ. ಪ್ರಣಾಳಿಕೆಯಲ್ಲಿ ಯಾವ ಅಂಶಗಳು ಇರಬೇಕು, ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬುದು ಸೇರಿ ಹತ್ತಾರು ವಿಷಯಗಳ ಕುರಿತು ಚರ್ಚಿಸಿ, ಪ್ರಣಾಳಿಕೆ ತಯಾರಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ರಾಮಮಂದಿರ, 370ನೇ ವಿಧಿ ರದ್ದುಗೊಳಿಸುವುದು ಸೇರಿ ಹಲವು ಪ್ರಮುಖ ವಿಷಯಗಳನ್ನು ಸೇರಿಸಿತ್ತು. ಆ ಭರವಸೆಗಳನ್ನು ಈಡೇರಿಸಿದ ಕಾರಣ ಹೊಸ ಅಂಶಗಳು ಏನಿರಲಿವೆ ಎಂಬ ಕುತೂಹಲ ಇದೆ.
ಇದನ್ನೂ ಓದಿ: Archana Patil: ಕಾಂಗ್ರೆಸ್‌ಗೆ ಶಾಕ್, ಕೇಂದ್ರದ ಮಾಜಿ ಸಚಿವನ ಸೊಸೆ ಬಿಜೆಪಿ ಸೇರ್ಪಡೆ!
ಚುನಾವಣೋತ್ತರ ಸಮೀಕ್ಷೆಗೆ ಕಡಿವಾಣ
ಏಪ್ರಿಲ್ 19ರಿಂದ ಜೂನ್ 1ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ ಎಂದ ಚುನಾವಣಾ ಆಯೋಗವು ಆದೇಶಿಸಿದೆ. ಮೊದಲ ಹಂತದ ಮತದಾನ ನಡೆಯುವ ಏಪ್ರಿಲ್ 19ರ ಬೆಳಗ್ಗೆ 7 ಗಂಟೆಯಿಂದ ಚುನಾವಣೆ ಮುಗಿಯುವ ಜೂನ್ 1ರ ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ. ಚುನಾವಣೆಯಲ್ಲಿ ಪಕ್ಷಗಳಿಗೆ ಬೆಂಬಲ, ಅಭಿಪ್ರಾಯ ಸಂಗ್ರಹ ಸೇರಿ ಯಾವುದೇ ರೀತಿಯ ಸಮೀಕ್ಷೆಗಳನ್ನು ನಡೆಸಬಾರದು ಹಾಗೂ ಅವುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂಬುದಾಗಿ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಏಪ್ರಿಲ್ 19ರಿಂದ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ