Site icon Vistara News

ವಿಸ್ತಾರ Explainer | ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಹಾಕಿದ ಪಟ್ಟು ಯಾವುದು?

PM Narendra Modi

2014ರ ಲೋಕಸಭೆಯ ಚುನಾವಣೆ ಪ್ರಚಂಡ ಗೆಲುವಿನ ಬಳಿಕ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಮತದಾರರನ್ನು ಸೆಳೆಯುವ ತಂತ್ರಗಳೇ ಬದಲಾಗಿವೆ. ಯಾವೆಲ್ಲ ವರ್ಗಗಳು ಬಿಜೆಪಿಯಿಂದ ದೂರವಿದ್ದವೋ ಆ ಎಲ್ಲ ವರ್ಗಗಳ ಮತದಾರರನ್ನು ತನ್ನೆಡೆಗೆ ಸೆಳೆಯಲು ಚುನಾವಣೆಯಿಂದ ಚುನಾವಣೆಗೆ ಯಶಸ್ವಿಯಾಗುತ್ತಿದೆ ಬಿಜೆಪಿ(BJP). ಈಗ ಈ ಸಾಲಿಗೆ ಬುಡಕಟ್ಟು ಸಮುದಾಯದ ಮತದಾರರು ಹೊಸ ಸೇರ್ಪಡೆಯಾಗಬಹುದು.

ಪ್ರತಿ ಚುನಾವಣೆಯಲ್ಲೂ ಬಿಜೆಪಿ ತನ್ನ ನಿಷ್ಠ ಮತದಾರರನ್ನು ಜತೆಗಿಟ್ಟುಕೊಳ್ಳುವುದರೊಂದಿಗೆ ಹೊಸ ಮತದಾರರನ್ನು ಶೋಧಿಸುತ್ತದೆ. ಈಗ ಅಂಥದ್ದೇ ಜಾಲವನ್ನು ಬಿಜೆಪಿ ಬೀಸಿದೆ. ಸೆಪ್ಟೆಂಬರ್ 14ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಸಂಪುಟ ಸಭೆಯಿಂದ ಹೊರ ಬಂದಾಗ ಗೆಲುವಿನ ನಗೆ ಬೀರುತ್ತಿದ್ದರು. ಇದಕ್ಕೆ ಕಾರಣ- ಕೇಂದ್ರ ಸರ್ಕಾರವು, ಪರಿಶಿಷ್ಟ ಪಂಗಡ(ಎಸ್‌ಟಿ) ಪಟ್ಟಿಯನ್ನು 735ರಿಂದ 750ಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿತ್ತು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಎಸ್‌ಟಿ ಪಟ್ಟಿಗೆ ಹೊಸ ಬಡುಕಟ್ಟು ಸಮುದಾಯಗಳು ಸೇರಲಿವೆ. ಸಹಜವಾಗಿಯೇ ಬಿಜೆಪಿಗೆ ಇವರೆಲ್ಲರೂ ಹೊಸ ಮತದಾರರು! ಅಂದ ಹಾಗೆ, 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಎಸ್‌ಟಿ ಪಟ್ಟಿಯನ್ನು ವಿಸ್ತರಿಸಿದ್ದರು. ಆ ಬಳಿಕ ಈ ಪಟ್ಟಿ ಪರಿಷ್ಕರಣೆಯೇ ಆಗಿಯೇ ಇರಲಿಲ್ಲ.

2024ರ ಚುನಾವಣೆಗೆ ಈಗಲೇ ಸ್ಕೆಚ್!
ಬಿಜೆಪಿಯು ಯಾವಾಗಲೂ ಚುನಾವಣೆ ಮೋಡ್‌ನಲ್ಲಿರುತ್ತದೆ ಎಂಬ ರಾಜಕೀಯ ಎದುರಾಳಿಗಳ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಚುನಾವಣೆಗೆ ಸದಾ ಸಿದ್ಧವಾಗಿರುತ್ತದೆ ಆ ಪಕ್ಷ ಮತ್ತು ಅದು ಕೈಗೊಳ್ಳುವ ಎಲ್ಲ ನಿರ್ಧಾರಗಳು, ಕಾರ್ಯಕ್ರಮಗಳು ಇದೇ ನಿಟ್ಟಿನಲ್ಲಿರುತ್ತವೆ. 2014ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈಗ ಬಿಜೆಪಿಯು ಎಸ್‌ಟಿ ಪಟ್ಟಿಯನ್ನು ಪರಿಷ್ಕರಿಸಿ, ಹೊಸ ಮತದಾರರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಹತ್ತೂವರೆ ಕೋಟಿ ಬುಡಕಟ್ಟು ಜನರು!
2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 10.6 ಕೋಟಿ ಬುಡಕಟ್ಟು ಜನರಿದ್ದಾರೆ. ಅಂದರೆ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.8.6ರಷ್ಟು ಅವರ ಪಾಲಿದೆ ಎಂದಾಯಿತು. ಈ ಬುಡಕಟ್ಟು ಸಮದಾಯದವರು ಬಹಳಷ್ಟು ಕ್ಷೇತ್ರದಲ್ಲಿ ಫಲಿತಾಂಶವನ್ನು ನಿರ್ಣಯಿಸುವಷ್ಟು ಶಕ್ತಿಯನ್ನು ಹೊಂದಿಲ್ಲದಿರಬಹುದು. ಆದರೆ, ಯಾವುದೇ ಅಭ್ಯರ್ಥಿ ಗೆಲುವಿಗೆ ಅಗತ್ಯ ಕೊಡುಗೆಯನ್ನು ನೀಡುವಷ್ಟು ಕ್ಷೇತ್ರಗಳು ಕೆಲವು ರಾಜ್ಯಗಳಲ್ಲಾದರೂ ಇವೆ. ಇನ್ನು ಕೆಲವು ರಾಜ್ಯಗಳಲ್ಲೇ ಅವರೇ ನಿರ್ಣಾಯಕರು. ರಾಷ್ಟ್ರಪತಿ ಚುನಾವಣೆಗೆ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿ ಮಾಡಿದಾಗಿನಿಂದ ಬಿಜೆಪಿ, ಈ ಸಮುದಾಯಕ್ಕೆ ಸೇರಿದ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ವೇಗಗೊಳಿಸಿತು. ದ್ರೌಪದಿ ಮುರ್ಮು ರಾಷ್ಟ್ರಪತಿಯಾಗುತ್ತಿದ್ದಂತೆ ಬಿಜೆಪಿ, ಹೊಸ ತಂತ್ರಗಳ ಮೂಲಕ ಈ ಮತದಾರರನ್ನು ತನ್ನತ್ತ ಸೆಳೆಯುತ್ತಿದೆ.

ಆರ್‌ಎಸ್ಎಸ್ ಕೂಡ ಸಾಥ್
ಬಿಜೆಪಿಯ ಮಾತೃ ಸಂಸ್ಥೆಯಾಗಿರುವ ಆರ್‌ಎಸ್ಎಸ್ ಕೂಡ ಈ ವಿಷಯದಲ್ಲಿ ನೆರವು ನೀಡುತ್ತಿದೆ. ಬುಡಕಟ್ಟು ಸಮುದಾಯಗಳಲ್ಲಿ ತನ್ನ ಕೆಡರ್ ಕಟ್ಟುತ್ತಿದೆ. ಈಗಾಗಲೇ ಸಂಘದ ಸಹವರ್ತಿ ಸಂಸ್ಥೆಗಳು ಈ ಕೆಲಸದಲ್ಲಿ ತಲ್ಲೀನವಾಗಿದ್ದು, ಕ್ರಿಶ್ಚಿಯನ್ ಮಿಷನರಿ ಮತ್ತು ಮಾವೋವಾದಿಗಳ ಪ್ರಭಾವ ಈ ಸಮುದಾಯಗಳ ಮೇಲೆ ಬೀಳದಂತೆ ನೋಡಿಕೊಳ್ಳುತ್ತಿವೆ.

ಯಾವೆಲ್ಲ ಸಮುದಾಯ ಸೇರ್ಪಡೆ?
ಈ ಮೊದಲೇ ಹೇಳಿದಂತೆ ಕೇಂದ್ರ ಸರ್ಕಾರವು ಎಸ್‌ಟಿ ಪಟ್ಟಿಯನ್ನು ಪರಿಷ್ಕರಿಸಿದೆ. ಹಲವು ಸಮುದಾಯಗಳ ದಶಕಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಉತ್ತರ ಪ್ರದೇಶದ ಗೊಂಡ ಸಮುದಾಯವನ್ನು ಸೇರ್ಪಡೆ ಮಾಡಲಾಗಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಈ ಸಮುದಾಯಕ್ಕೆ ಭರವಸೆ ನೀಡಲಾಗಿತ್ತು. ಅದರಂತೆ ಈಗ ಗೊಂಡ ಸಮುದಾಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಗೊಂಡ ಸಮುದಾಯದ ಉಪ ಪಂಗಡಗಳಾದ ಧುರಿಯಾ, ನಾಯಕ್, ಓಜಾ, ಪಠಾರಿ, ರಾಜಗೊಂಡ ಕಮ್ಯುನಿಟಿ ಕೂಡ ಸೇರ್ಪಡೆ ಮಾಡಲಾಗಿದೆ. ಉತ್ತರ ಪ್ರದೇಶದ 13 ಜಿಲ್ಲೆಗಳಲ್ಲಿ ಇವರು ಹಂಚಿ ಹೋಗಿದ್ದಾರೆ.

ಹಟ್ಟಿ ಸಮುದಾಯ
ಹಿಮಾಚಲ ಪ್ರದೇಶದಲ್ಲಿರುವ ಹಟ್ಟಿ ಸಮುದಾಯವು ಕೂಡ 6 ದಶಕಗಳಿಂದಲೂ ತಮ್ಮನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ಹೋರಾಟ ಮಾಡಿಕೊಂಡು ಬಂದಿದೆ. ಈಗ ಅವರ ಹೋರಾಟಕ್ಕೆ ಫಲ ದೊರೆತಿದೆ. ಈ ಸಮುದಾಯದ ಕುಲ ಕಸಬು ತರಕಾರಿ, ಮಾಂಸ, ಉಣ್ಣೆ ಮಾರಾಟ ಮಾಡುವುದು. ಸಾಂಪ್ರದಾಯಿಕವಾಗಿ ಈ ಸಮುದಾಯವು ಕಾಂಗ್ರೆಸ್ ಅನ್ನು ಬೆಂಬಲಿಸಿಕೊಂಡು ಬಂದಿದೆ.

ಇದೇ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಅವರು, ಎಸ್‌ಟಿ ಪಟ್ಟಿಗೆ ಈ ಸಮುದಾಯವನ್ನು ಸೇರಿಸಲು ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಸದ್ಯ ಬಿಜೆಪಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಈವಿಷಯವನ್ನು ಮತ್ತೆ ಮುನ್ನೆಲೆ ತಂದು, ಹಳೆಯ ಬೇಡಿಕೆ ಈಡೇರುವಂತೆ ನೋಡಿಕೊಂಡಿದ್ದಾರೆ. ಅಲ್ಲಿಗೆ, ಬಿಜೆಪಿಯ ವೋಟ್ ಬ್ಯಾಂಕ್ ವಿಸ್ತಾರವಾದಂತಾಗಿದೆ. ಹಟ್ಟಿ ಸಮುದಾಯವು ಸಿರ್ಮೌರ್ ಜಿಲ್ಲೆಯಲ್ಲಿ ಪ್ರಭಾವಿಯಾಗಿದೆ. ಈ ಜಿಲ್ಲೆ ಐವರು ಶಾಸಕರನ್ನು ಆಯ್ಕೆ ಮಾಡುತ್ತದೆ. ಈ ಬಾರಿ ಬಹುಶಃ ಬಿಜೆಪಿ ಇಲ್ಲಿ ಐದಕ್ಕೂ ಐದು ಸೀಟ್ ಗೆಲ್ಲಬಹುದು!

ಏನೇನು ಲಾಭ?
ಎಸ್‌ಟಿ ಪಟ್ಟಿಗೆ ಸೇರ್ಪಡೆಯಾದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಶೈಕ್ಷಣಿಕವಾಗಿ ವಿದ್ಯಾರ್ಥಿ ವೇತನಗಳು, ಕಡಿಮೆ ಬಡ್ಡಿ ದರಕ್ಕೆ ಸಾಲ, ನ್ಯಾಷನಲ್ ಶೆಡ್ಯುಲ್ಡ್ ಟ್ರೈಬ್ಸ್ ಫೈನಾನ್ಸ್ ಮತ್ತು ಡೆವಲ್‌ಮೆಂಟ್‌ ಕಾರ್ಪೊರೇಷನ್‌ನಿಂದ ಲೋನ್ ತೆಗೆದುಕೊಳ್ಳಬಹುದು. ಸರ್ಕಾರಿ ನೌಕರಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಪಡೆಯುವಾಗ ಮೀಸಲಾತಿ ಸೌಲಭ್ಯ ದೊರೆಯುತ್ತದೆ. ಹಲವು ಯೋಜನೆಗಳ ಲಾಭವನ್ನು ನೇರವಾಗಿ ಪಡೆಯಬಹುದು.

ಬೆಟ್ಟ ಕುರುಬ, ಬ್ರಿಜಿಯಾಗೆ ಭರ್ಜರಿ ಗಿಫ್ಟ್
ಛತ್ತೀಸ್‌ಗಢದ ಬ್ರಿಜಿಯಾ ಮತ್ತು ಬಿಂಜಿಯಾ, ತಮಿಳುನಾಡಿನ ನಾರಿಕೊರವನ್ ಮತ್ತು ಕುರಿವಿಕ್ಕರನ್, ಕರ್ನಾಟಕದಲ್ಲಿ ಬೆಟ್ಟ ಕುರುಬ ಸಮುದಾಯವನ್ನು ಹೊಸ ಎಸ್‌ಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪೈಕಿ ಕೆಲವು ಸಮುದಾಯಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಎಸ್‌ಟಿ ಸ್ಟೇಟಸ್ ನೀಡಲಾಗಿದೆ ಎಂಬುದು ಗಮನಾರ್ಹ!

ದ್ರೌಪದಿ ಮುರ್ಮು ಆಯ್ಕೆ ನೆರವಾದೀತೆ?
ಎಸ್‌ಟಿ ಪಟ್ಟಿಯನ್ನು ಪರಿಷ್ಕರಿಸುವ ಮೂಲಕ ಬಿಜೆಪಿ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆದಿದೆ. ಮೊದಲನೆಯದು ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದಾದರೆ, ಎರಡನೆಯದಾಗಿ ತನ್ನ ವೋಟ್‌ ಬ್ಯಾಂಕ್‌ಗೆ ಹೊಸ ಮತದಾರರನ್ನು ಸೇರಿಸಿಕೊಳ್ಳುವುದು. ಹಾಗೆ ನೋಡಿದರೆ, ಬಿಜೆಪಿಯಲ್ಲಿ ಪ್ರಮುಖ ಬುಡಕಟ್ಟು ನಾಯಕರಾರು ಇರಲಿಲ್ಲ. ಆದರೆ, ಆ ಕೊರತೆಯನ್ನು ಈಗ ದ್ರೌಪದಿ ಮುರ್ಮು ನೀಗಿಸುವ ಸಾಧ್ಯತೆ ಇದೆ. ಮುರ್ಮು ಅವರನ್ನು ರಾಷ್ಟ್ರಪತಿ ಮಾಡುತ್ತಿದ್ದಂತೆ ಸಹಜವಾಗಿಯೇ ಬುಡಕಟ್ಟು ಜನರು ಬಿಜೆಪಿಯ ಕಡೆಗೆ ಸಾಫ್ಟ್‌ ಕಾರ್ನರ್ ಬೆಳೆಸಿಕೊಳ್ಳಬಹುದು ಮತ್ತು ಅದು ವೋಟ್ ಆಗಿ ಕನ್ವರ್ಟ್ ಆಗಬಹುದು ಎಂಬ ಲೆಕ್ಕಾಚಾರವಿದೆ.

ಕಾಂಗ್ರೆಸ್ ಜತೆಗಿರುವ ಸಮುದಾಯಗಳು
ಸಾಂಪ್ರದಾಯಿಕವಾಗಿ ಈ ಬುಡಕಟ್ಟು ಸಮುದಾಯಗಳು ಕಾಂಗ್ರೆಸ್ ಜತೆಗಿವೆ. ಈ ಸಖ್ಯವನ್ನು ಮುರಿಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದರಲ್ಲಿ ಸಕ್ಸೆಸ್ ಸಿಗುತ್ತಾ? 2024ರ ಲೋಕಸಭೆ ಎಲೆಕ್ಷನ್ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶಗಳಲ್ಲಿ ನಡೆದ ಕಳೆದ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಒಟ್ಟು 128 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ 86 ಕ್ಷೇತ್ರಗಳಲ್ಲಿ ಗೆದ್ದಿದೆ. ಅಂದರೆ, ಸಹಜವಾಗಿ ಇವರು ಕಾಂಗ್ರೆಸ್ ಮತದಾರರು. ಆದರೆ, ಈ ಪರಿಸ್ಥಿತಿ ಬದಲಾಗಬಹುದೇ? ನವೆಂಬರ್‌ನಲ್ಲಿ ಹಿಮಾಚಲ ಪ್ರದೇಶ ಮತ್ತು ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಎಲೆಕ್ಷನ್ ನಡೆದರೆ, 2023ರಲ್ಲಿ ಇನ್ನೂ 8 ರಾಜ್ಯಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವೇಳೆ, ಬಿಜೆಪಿ ಉರುಳಿಸಿರುವ ದಾಳ ಫಲ ನೀಡಿದೆಯೇ ಇಲ್ಲವೇ ಎಂಬುದು ತಿಳಿಯಲಿದೆ.

ಮತ್ತೇನು ಕಾರ್ಯಕ್ರಮಗಳು?
ಸರ್ಕಾರದ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳು ಜಾರಿಗೊಳಿಸಲಾಗುತ್ತಿದೆ. ನೀತಿಗಳನ್ನು ರೂಪಿಸಲಾಗಿದೆ. ಬುಡಕಟ್ಟ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು, 1927ರ ಭಾರತೀಯ ಅರಣ್ಯ ಕಾಯಿದೆ, 2003ರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆಗೆ ತಿದ್ದುಪಡಿಯನ್ನು ಕೈಬಿಟ್ಟಿತು. ಜತೆಗೇ, ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಹಣವನ್ನು ಹೆಚ್ಚಿಸಲಾಗಿದೆ. ಸಹಜ ಕೃಷಿಗೆ ಒತ್ತು ನೀಡಲಾಗಿದೆ. ಸರ್ಕಾರ ಮತ್ತು ಪಕ್ಷದ ಈ ಎಲ್ಲ ನಡೆಗಳು ಬುಡಕಟ್ಟು ಸಮುದಾಯದ ಮತದಾರರನ್ನು ತನ್ನತ್ತ ಸೆಳೆಯುವುದೇ ಆಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಲೋಕಸಭೆ, ರಾಜ್ಯಗಳಲ್ಲಿ ಎಷ್ಟು ಮೀಸಲು ಕ್ಷೇತ್ರ?
ದೇಶದಲ್ಲಿಒಟ್ಟು 47 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಅದೇ ರೀತಿ ಆಂಧ್ರ ಪ್ರದೇಶದಲ್ಲಿ 5, ಅರುಣಾಚಲ ಪ್ರದೇಶ 59, ಅಸ್ಸಾಮ್ 17, ಬಿಹಾರ 2, ಛತ್ತೀಸ್‌ಗಢ 29, ಗುಜರಾತ್ 26, ಹಿಮಾಚಲ ಪ್ರದೇಶ 3, ಜಾರ್ಖಂಡ್ 22, ಕರ್ನಾಟಕ 15, ಕೇರಳ 2, ಮಧ್ಯ ಪ್ರದೇಶ 47, ಮಹಾರಾಷ್ಟ್ರ 25, ಮಣಿಪುರ 19, ಮೇಘಾಲಯ 55, ಮಿಜೋರಾಮ್ 39, ನಾಗಾಲ್ಯಾಂಡ್ 4, ಒಡಿಶಾ 106, ರಾಜಸ್ಥಾನ 25, ಸಿಕ್ಕಿಮ್ 12, ತಮಿಳುನಾಡು 2, ತೆಲಂಗಾಣ 9, ತ್ರಿಪುರಾ 20, ಉತ್ತರಾಖಂಡ 2, ಪಶ್ಚಿಮ ಬಂಗಾಳ 16 ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ.

ಈ ರಾಜ್ಯಗಳಲ್ಲಿ ಎಸ್‌ಟಿ ಮೀಸಲು ಕ್ಷೇತ್ರವಿಲ್ಲ
ದಿಲ್ಲಿ, ಗೋವಾ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಪುದುಚೆರಿ, ಪಂಜಾಬ್, ಉತ್ತರ ಪ್ರದೇಶ.

ಇದನ್ನೂ ಓದಿ | PAY CM ಅಭಿಯಾನ ಆರಂಭಿಸಿದ ಕಾಂಗ್ರೆಸ್‌: QR ಕೋಡ್‌ಗೆ ಸಿಟ್ಟಿಗೆದ್ದ ಬಿಜೆಪಿ

Exit mobile version