ಪಟನಾ: ಬಿಜೆಪಿ ನಿರೀಕ್ಷಿಸದ ಹೆಜ್ಜೆಯನ್ನಿಟ್ಟಿದ್ದಾರೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ !. ಬಿಜೆಪಿ ನಮ್ಮನ್ನು ತುಚ್ಛವಾಗಿ ನೋಡುತ್ತಿದೆ, ಎನ್ಡಿಎ ಒಕ್ಕೂಟದ ಒಡೆದು ಆಳುವ ನೀತಿ ನಮಗೆ ಸಹಿಸಲಾಗುತ್ತಿಲ್ಲ ಎಂದೆಲ್ಲ ಹೇಳಿ, ಬಿಜೆಪಿಯಿಂದ ಮೈತ್ರಿ ಕಳೆದುಕೊಂಡಿರುವ ನಿತೀಶ್ ಕುಮಾರ್, ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ಜತೆ ಸೇರಿ ಮತ್ತೊಮ್ಮೆ ಮಹಾ ಘಟ್ ಬಂಧನ್ ರಚಿಸಿಕೊಂಡು ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನೂ ಐದು ಪಕ್ಷಗಳು ತಮ್ಮ ಬೆಂಬಲ ಘೋಷಿಸಿವೆ. ಇವ್ಯಾವವೂ ಬಿಜೆಪಿಯ ಗಮನಕ್ಕೆ ಸ್ವಲ್ಪವೂ ಬಾರದೆ ನಡೆದ ಬೆಳವಣಿಗೆಗಳಾ?- ತನ್ನ ಪಕ್ಕದಲ್ಲೇ ಕುಳಿತುಕೊಂಡು ಜೆಡಿಯು ಹೆಣೆದ ಬೆಲೆ ಬಿಜೆಪಿಗೆ ಕಾಣಿಸಲೇ ಇಲ್ಲವಾ? ಈ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.
ಬಿಜೆಪಿ ಮೂಲಗಳು ಹೇಳಿರುವ ಪ್ರಕಾರ, ಆ ಪಕ್ಷಕ್ಕೆ ಸಣ್ಣದೊಂದು ಸುಳಿವು ಸಿಕ್ಕಿತ್ತು. ಜೆಡಿಯು ಪಕ್ಷ ಎನ್ಡಿಎ ಜತೆಗಿನ ಮೈತ್ರಿ ಕಳೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ, ಯಾವ ಕ್ಷಣದಲ್ಲಿ ಬೇಕಾದರೂ ಅದು ಹೊರಹೋಗಬಹುದು ಎಂಬ ಅನುಮಾನ ಬಿಜೆಪಿ ಪ್ರಮುಖರಿಗೆ ಬಂದಿತ್ತು. ಆದರೆ, ಹೀಗೆ ಹೊರಬಿದ್ದ ನಿತೀಶ್ ಕುಮಾರ್ ಮತ್ತೆ ಲಾಲೂ ಪ್ರಸಾದ್ ಯಾದವ್ರ ಆರ್ಜೆಡಿಯೊಂದಿಗೇ ಸ್ನೇಹಕ್ಕೆ ಕೈಚಾಚುತ್ತಾರೆ ಎಂಬ ಒಂದು ಸಣ್ಣ ಸುಳಿವಾಗಲೀ, ನಿರೀಕ್ಷೆಯಾಗಲೀ ಅವರಿಗೆ ಇರಲಿಲ್ಲ ಎಂದು ಹೇಳಲಾಗಿದೆ.
2013ರಲ್ಲಿ ಒಮ್ಮೆ ಬಿಜೆಪಿ ಮೈತ್ರಿ ಮುರಿದುಕೊಂಡಿದ್ದ ನಿತೀಶ್ ಕುಮಾರ್ ಕಾಂಗ್ರೆಸ್-ಆರ್ಜೆಡಿಯೊಂದಿಗೆ ಸೇರಿ ಮಹಾ ಘಟ್ ಬಂಧನ್ ರಚಿಸಿಕೊಂಡಿದ್ದರು. ಈ ಮಹಾಮೈತ್ರಿ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆರ್ಜೆಡಿ ಬಗ್ಗೆ ತುಂಬ ಅಸಮಾಧಾನ ಹೊಂದಿಯೇ 2017ರಲ್ಲಿ ಮತ್ತೆ ಅದರ ಮೈತ್ರಿಯನ್ನೂ ಕಳೆದುಕೊಂಡಿದ್ದರು. ಕಾನೂನು-ಸುವ್ಯವಸ್ಥೆ ಸಾಧಿಸಲು ಮಹಾ ಘಟ್ ಬಂಧನ್ ಅಡ್ಡಿ ಎಂದು ಆರೋಪಿದ್ದರು. ಅಷ್ಟೇ ಅಲ್ಲ, 2020ರ ಬಿಹಾರ ವಿಧಾನಸಭೆ ಚುನಾವಣೆ ವೇಳೆ, ನಿತೀಶ್ ಕುಮಾರ್ ಆರ್ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮನೆತನದ ಭ್ರಷ್ಟಾಚಾರಗಳ ಬಗ್ಗೆ ಎತ್ತಾಡಿದ್ದರು. ಅಂಥ ನಿತೀಶ್ ಈಗ ಮತ್ತೆ ಹೋಗಿ ಆರ್ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ಅನಿರೀಕ್ಷಿತ ಎನ್ನಲಾಗಿದೆ.
NiLu ಕಂ ಬ್ಯಾಕ್!
ಬಿಹಾರದಲ್ಲಿ 2017ರಲ್ಲಿ ಆರ್ಜೆಡಿ-ಜೆಡಿಯು ಬೇರ್ಪಡುವಾಗ ಈ ಎರಡೂ ಪಕ್ಷಗಳ ನಾಯಕರು ಪರಸ್ಪರ, ಅದೆಷ್ಟರ ಮಟ್ಟಿಗೆ ವಾಗ್ದಾಳಿ ನಡೆಸಿದ್ದರು ಎಂದರೆ, ಇನ್ನೆಂದೂ ಜನ್ಮದಲ್ಲಿ ಇವರಿಬ್ಬರು ಒಂದಾಗಲಾರರು ಎಂದೇ ಭಾವಿಸಲಾಗಿತ್ತು. ಲಾಲೂ ಪ್ರಸಾದ್ ಯಾದವ್ ಅವರಂತೂ ನಿತೀಶ್ ಕುಮಾರ್ರನ್ನು ಹಾವಿಗೆ ಹೋಲಿಸಿದ್ದರು. ‘ನಿತೀಶ್ ಕುಮಾರ್ ಒಂದು ಹಾವಿದ್ದಂತೆ. ಹಾವು ಪೊರೆ ಕಳಚುವಂತೆ ನಿತೀಶ್ ಕುಮಾರ್ ಕೂಡ ಎರಡು ವರ್ಷಕ್ಕೊಮ್ಮೆ ಪಕ್ಷ ಬದಲಿಸುತ್ತಾರೆ’ ಎಂದು ಟೀಕಿಸಿದ್ದರು. ನಿತೀಶ್ ಕುಮಾರ್ ಕೂಡ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನೇ ಮಾಡಿ ಹೊರಬಂದಿದ್ದರು. ಆದರೆ ಅವೆಲ್ಲವನ್ನೂ ಮರೆತು ಈಗ ನಿತೀಶ್ ಕುಮಾರ್-ಲಾಲೂ ಪ್ರಸಾದ್ ಯಾದವ್ (NiLu) ಒಂದಾಗಿದ್ದಾರೆ. ಅಂದು ಲಾಲೂ ಪ್ರಸಾದ್ ಮಾಡಿರುವ ಟ್ವೀಟ್ನ್ನು ಬಿಜೆಪಿ ಈಗ ಎತ್ತಾಡಿ, ವ್ಯಂಗ್ಯ ಮಾಡುತ್ತಿದೆ.
ಇದನ್ನೂ ಓದಿ: Bihar politics | ನಿತೀಶ್ ಸಿಎಂ, ತೇಜಸ್ವಿ ಡಿಸಿಎಂ ಆಗಿ ಇಂದು 2 ಗಂಟೆಗೆ ಪ್ರಮಾಣ