Site icon Vistara News

ತಮಿಳುನಾಡು ವಿಭಜನೆ ಮಾಡ್ಬೇಕಾ? ಮಾಡ್ತೀವಿ ಬಿಡಿ, ನಮ್ಗೆ ಆ ತಾಕತ್ತಿದೆ ಎಂದ ಬಿಜೆಪಿ ನಾಯಕ

Nainar Nagendran

ಚೆನ್ನೈ: ಕೇಂದ್ರ ಸರಕಾರದ ತಾರತಮ್ಯ ಧೋರಣೆಗಳನ್ನು ನೋಡಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕು ಅನಿಸುತ್ತಿದೆ ಎಂದು ಡಿಎಂಕೆಯ ಸಂಸದ ಎ. ರಾಜಾ ಅವರು ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರೇ ವಿರೋಧಿಸಿದರು. ಇದರ ಬೆನ್ನಿಗೇ ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿ ಸದನ ನಾಯಕರಾಗಿರುವ ನೈನಾರ್‌ ನಾಗೇಂದ್ರನ್‌ ಅವರು ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ʻʻರಾಜಾ ಅವರಿಗೇನು ರಾಜ್ಯವನ್ನು ವಿಭಜನೆ ಮಾಡಬೇಕಾ? ಬಿಜೆಪಿಗೆ ಆ ತಾಕತ್ತಿದೆ. ಬೇಕಿದ್ರೆ ಹೇಳಿ, ದಕ್ಷಿಣ ತಮಿಳು ನಾಡು ಬೇರೆ, ಉತ್ತರ ತಮಿಳುನಾಡು ಬೇರೆ ರಾಜ್ಯ ಮಾಡ್ತೀವಿʼʼ ಎಂದು ರಾಜಾ ಅವರಿಗೆ ಸವಾಲು ಹಾಕಿದ್ದಾರೆ.

೨೦೨೧ರ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಆಡಳಿತಾರೂಢ ಡಿಎಂಕೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನಾದ್ಯಂತ ಬಿಜೆಪಿ ವತಿಯಿಂದ ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ನಾಗೇಂದ್ರನ್‌, ʻʻಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಮಿಳುನಾಡನ್ನು ವಿಭಜನೆ ಮಾಡಬಲ್ಲರು. ಯಾಕೆಂದರೆ ಅವರೇ ನಿರ್ಧಾರ ಮಾಡುವವರುʼʼ ಎಂದು ಹೇಳಿದ್ದಾರೆ.

ʻʻರಾಜಾ ಅವರು ತನಗೆ ಪ್ರತ್ಯೇಕ ರಾಜ್ಯ ಬೇಕು ಅಂತ ಕೇಳಿದ್ದಾರೆ. ರಾಜಾ ಅವರಿಗೆ ಇಂಥದ್ದೊಂದು ಆಸೆ ಇದೆ ಎಂದಾದರೆ, ನಾಗೇಂದ್ರ ಅವರಿಗೆ ಏನೂ ಇರಲ್ಲ ಅಂತೀರಾ? ನಮ್ಮಲ್ಲಿ ೨೩೪ ಕ್ಷೇತ್ರಗಳಿವೆ. ನಾನು ಹೇಳುತ್ತೇನೆ, ತಮಿಳುನಾಡನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡೋಣ. ಪ್ರತಿಯೊಂದು ರಾಜ್ಯಕ್ಕೂ ೧೧೭ ಕ್ಷೇತ್ರಗಳು ಬರುತ್ತವೆ. ಆಗ ಇಬ್ಬರು ಮುಖ್ಯಮಂತ್ರಿಗಳಾಗಹುದು. ಒಂದೋ ಇಬ್ಬರೂ ಬಿಜೆಪಿಯಿಂದಲೇ ಇರಬಹುದು, ಇಲ್ಲವೇ ಮಿತ್ರ ಕೂಟದವರು ಆಗಬಹುದುʼʼ ಎಂದಿದ್ದಾರೆ ನಾಗೇಂದ್ರನ್‌.

ʻʻನಮಗೆ ರಾಜ್ಯವನ್ನು ವಿಭಜನೆ ಮಾಡೋಕೆ ಆಗಲ್ಲ ಅಂತ ತಿಳಿದುಕೊಳ್ಳಬೇಡಿ. ನಾವು ಅದನ್ನೆಲ್ಲ ಮಾಡುವ ಸ್ಥಾನದಲ್ಲಿದ್ದೇವೆ. ಮೋದಿ ಅವರು ಮನಸ್ಸು ಮಾಡಿದರೆ ವಿಭಜನೆ ಆಗುತ್ತದೆʼʼ ಎಂದು ತಿರುನಲ್ವೇಲಿ ಕ್ಷೇತ್ರದ ಸಂಸದರಾಗಿರುವ ನಾಗೇಂದ್ರ ಹೇಳಿದ್ದಾರೆ. ಇವರು ಮೊದಲು ಎಐಎಡಿಎಂಕೆಯಲ್ಲಿದ್ದು ಬಳಿಕ ಬಿಜೆಪಿಗೆ ಜಿಗಿದಿದ್ದರು.

ಏನೂ ಹೇಳದ ಬಿಜೆಪಿ, ಕಥೆ ಹೇಳಿದ ಅಣ್ಣಾಮಲೈ!
ಬಿಜೆಪಿಯ ಸದನ ನಾಯಕರಾಗಿರುವ ನಾಗೇಂದ್ರನ್‌ ಅವರು ಈ ಸ್ಫೋಟಕ ಹೇಳಿಕೆಯನ್ನು ನೀಡಿದ್ದರೂ ಬಿಜೆಪಿ ಇದನ್ನು ಸಮರ್ಥಿಸಿಯೂ ಇಲ್ಲ, ವಿರೋಧಿಸಿಯೂ ಇಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಮಿಳುನಾಡು ಮತ್ತು ಮಹಾರಾಷ್ಟ್ರದ ನಡುವೆ ಒಂದು ಹೋಲಿಕೆಯನ್ನು ಮಾಡಿದ್ದಾರೆ.
ʻʻಡಿಎಂಕೆ ಮತ್ತು ಮಹಾರಾಷ್ಟ್ರದ ಶಿವಸೇನೆಯ ನಡುವೆ ಒಂದು ಸಾಮ್ಯತೆ ಇದೆ. ತಮಿಳುನಾಡಿನಲ್ಲೂ ಒಬ್ಬ ಏಕನಾಥ ಶಿಂಧೆ ಎದ್ದುಬರುತ್ತಾರೆʼʼ ಎಂದು ಉದ್ಧವ್‌ ಠಾಕ್ರೆ- ಏಕನಾಥ್‌ ಶಿಂಧೆ ಪ್ರಕರಣವನ್ನು ಉಲ್ಲೇಖಿಸಿ ಹೇಳಿದ್ದಾರೆ ಅಣ್ಣಾಮಲೈ.

ಡಿಎಂಕೆ ಆಕ್ರೋಶ
ಈ ನಡುವೆ, ನಾಗೇಂದ್ರನ್‌ ಅವರ ಹೇಳಿಕೆಯನ್ನು ಡಿಎಂಕೆ ಖಂಡಿಸಿದೆ. ಬಿಜೆಪಿಗೆ ಅಧಿಕಾರದ ಅಮಲು ಎಂದು ಛೇಡಿಸಿದೆ. ʻʻನಾಗೇಂದ್ರನ್‌ ಅವರು ಯಾವ ಆಧಾರದಲ್ಲಿ ತಮಿಳುನಾಡನ್ನು ವಿಭಜಿಸುತ್ತೇವೆ ಅಂತಿದ್ದಾರೆ. ಅವರಿಗೆ ೪೦೩ ಮತ ಕ್ಷೇತ್ರಗಳಿರುವ ಉತ್ತರ ಪ್ರದೇಶವನ್ನೇ ವಿಭಜನೆ ಮಾಡಲು ಆಗಿಲ್ಲ. ನಾಗೇಂದ್ರನ್‌ ಅವರು ಮಾತನಾಡುವುದು ನೋಡಿದರೆ ಬಿಜೆಪಿಗೆ ಕಾನೂನಿನ ಚೌಕಟ್ಟಿನ ಬಗ್ಗೆ ಯಾವುದೇ ಗೌರವ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕೇವಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂದ ಮಾತ್ರಕ್ಕೆ ತಮಿಳುನಾಡು ವಿಭಜನೆ ಮಾಡುತ್ತೇವೆ ಅಂತಾರಲ್ಲಾ.. ಒಂದು ವೇಳೆ ಅವರು ಮೂರು ಭಾಗಗಳಾಗಿ ವಿಭಜಿಸಿದರೆ ಡಿಎಂಕೆ ಮೂರು ಮುಖ್ಯಮಂತ್ರಿಗಳನ್ನು ಹೋಂದಿದಂತಾಗುತ್ತದೆʼʼ ಎಂದು ಡಿಎಂಕೆ ಸಂಸದ ಟಿಕೆಎಸ್‌ ಇಳಾಂಗೋವನ್‌ ಹೇಳಿದ್ದಾರೆ.

ನಾಗೇಂದ್ರನ್‌ ಮಾತನಾಡುವುದು ಮೊದಲಲ್ಲ!
ನಾಗೇಂದ್ರನ್‌ ಅವರು ತಮಿಳುನಾಡು ವಿಭಜನೆಯ ಬಗ್ಗೆ ಮಾತನಾಡುವುದು ಇದು ಮೊದಲ ಬಾರಿಯೇನಲ್ಲ. ೨೦೨೧ರ ಜುಲೈನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ಮಂತ್ರಿಗಳ ಬಗ್ಗೆ ಪ್ರೊಫೈಲ್‌ ಬಿಡುಗಡೆ ಮಾಡುವಾಗ ಎಲ್‌ ಮುರುಗನ್‌ ಅವರನ್ನು ಉಲ್ಲೇಖಿಸುವಾಗ ಅವರು ಕೊಂಗು ನಾಡಿಗೆ ಸೇರಿದವರು ಎಂದು ಬರೆಯಲಾಗಿತ್ತು. ಕೊಂಗು ಎಂದರೆ ತಮಿಳುನಾಡಿನ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಪ್ರಾಂತ್ಯ. ಈ ಭಾಗದಲ್ಲಿ ಬಿಜೆಪಿ ಉತ್ತಮ ವೋಟ್‌ ಬೇಸನ್ನು ಹೊಂದಿದೆ. ಆಗ ಮಾತನಾಡಿದ್ದ ನಾಗೇಂದ್ರನ್‌ ಅವರು, ʻʻಜನರ ಆಶೋತ್ತರಗಳನ್ನು ಈಡೇರಿಸುವುದು ಕೇಂದ್ರ ಸರಕಾರದ ಕರ್ತವ್ಯʼʼ ಎಂದು ಖುಷಿಪಟ್ಟಿದ್ದರು. ಕೊಂಗು ನಾಡು ಪ್ರತ್ಯೇಕವಾದಂತೆ ಖುಷಿಯಾಗಿದ್ದರು. ಆದರೆ, ಮರು ದಿನವೇ ಬಿಜೆಪಿ ಒಂದು ಸ್ಪಷ್ಟೀಕರಣವನ್ನು ನೀಡಿ ಅದು ಟೈಪ್‌ ಮಾಡುವಾಗ ಆದ ತಪ್ಪು ಎಂದು ಸ್ಪಷ್ಟೀಕರಣ ನೀಡಿತ್ತು.

ಎ. ರಾಜಾ ಹೇಳಿದ್ದೇನು?

ತಮಿಳುನಾಡಿನಲ್ಲಿ ಪಕ್ಷದ ಸ್ಥಳೀಯ ನಾಯಕರ ಸಭೆಯನ್ನುದೇಶಿಸಿ ಇತ್ತೀಚೆಗೆ ಮಾತನಾಡುವ ಸಂದರ್ಭದಲ್ಲಿ, “ಪ್ರಧಾನ ಮಂತ್ರಿ ಮತ್ತು ಅಮಿತ್‌ ಶಾ ಅವರನ್ನು ವಿನಮ್ರವಾಗಿ ಕೇಳುತ್ತಿದ್ದೇನೆ, ನಾಯಕ ಪೆರಿಯಾರ್‌ ಅವರ ಮಾರ್ಗವನ್ನು ನಾವು ತುಳಿಯುವಂತೆ ಮಾಡಬೇಡಿ. ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಂತೆ ಮಾಡಬೇಡಿ. ನಮ್ಮ ರಾಜ್ಯಕ್ಕೆ ಸ್ವಾಯತ್ತತೆಯನ್ನು ನೀಡಿ, ಅಲ್ಲಿಯವರೆಗೂ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ| ತಮಿಳುನಾಡು ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿ ವಿವಾದ ಎಬ್ಬಿಸಿದ ಡಿಎಂಕೆ ನಾಯಕ

Exit mobile version