ನವದೆಹಲಿ: ಹಣದುಬ್ಬರಕ್ಕೆ ಸಂಬಂಧಿಸಿದಂತೆ ಬಳಸಿದ ಪದಗಳನ್ನು ಸಚಿವ ಸ್ಮೃತಿ ಇರಾನಿಗೆ (Smriti Irani) ಅನ್ವಯಿಸಿ ಟ್ವೀಟ್ ಮಾಡಿದ್ದ ಭಾರತೀಯ ಜನತಾ ಪಾರ್ಟಿ(BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ವಿರುದ್ಧ, ಕರ್ನಾಟಕದವರೇ ಆದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ (BV Srinivas) ಅವರು ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್ ಸಂಕಲ್ಪ ಸತ್ಯಾಗ್ರಹದ ವೇಳೆ ಶ್ರೀನಿವಾಸ್ ಅವರು ಮಾತನಾಡಿದ ವಿಡಿಯೋ ಕ್ಲಿಪ್ ಬಿಜೆಪಿ ನಾಯಕರು ಷೇರ್ ಮಾಡಿಕೊಂಡಿದ್ದರು. ಬಿಜೆಪಿಯ ಪ್ರಕಾರ, ಶ್ರೀನಿವಾಸ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಡಾರ್ಲಿಂಗ್ ಎಂದು ಸಂಬೋಧಿಸಿದ್ದಾರೆ. ಆದರೆ, ಈ ಆರೋಪವನ್ನು ಶ್ರೀನಿವಾಸ್ ತಳ್ಳಿ ಹಾಕಿದ್ದಾರೆ.
ಅಮಿತ್ ಮಾಳವೀಯ ಟ್ವೀಟ್
ಬಿ ವಿ ಶ್ರೀನಿವಾಸ್ ಅಸಭ್ಯ, ಕಾಮಪ್ರಚೋದಕ ವ್ಯಕ್ತಿ. ಡಾರ್ಲಿಂಗ್ ಮಾಡಿ ಅವರನ್ನು ಬೆಡ್‌ರೂಂನಲ್ಲಿ ಕುಳಿತುಕೊಳ್ಳುವ ಹಾಗೆ ಮಾಡಿದರು ಎಂದು ಸಚಿವೆ ಸ್ಮೃತಿ ಇರಾನಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಅಮೇಠಿಯಿಂದ ರಾಹುಲ್ ಗಾಂಧಿ ಅವರನ್ನು ಸೋಲಿಸಿದರು ಎಂಬ ಕಾರಣಕ್ಕೆ ಇಷ್ಟು ಕೀಳು ಮಟ್ಟದ ಭಾಷಣ ಮಾಡಬೇಕೇ, ಕಾಂಗ್ರೆಸ್ ಅಪ್ರಸ್ತುತವಾಗುತ್ತಿದೆ ಎಂದು ಅಮಿತ್ ಮಾಳವೀಯ ಅವರು ಟ್ವೀಟ್ ಮಾರ್ಚ್ 27ರಂದು ಟ್ವೀಟ್ ಮಾಡಿದ್ದರು. ಬಳಿಕ ಬಿಜೆಪಿಯ ಎಲ್ಲ ನಾಯಕರು ಈ ಟ್ವೀಟ್ ಮಾಡಿದ್ದರಿಂದ ಭಾರೀ ವಿವಾದಕ್ಕೆ ಕಾರಣವಾಯಿತು.
ತಿದ್ದಿದ ವಿಡಿಯೋ ಹಂಚುತ್ತಿರುವ ಬಿಜೆಪಿ ನಾಯಕರು
ಅಮಿತ್ ಮಾಳವೀಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಬಿಜೆಪಿ ನಾಯಕರು ತಮ್ಮ ಹಾಗೂ ತಮ್ಮ ಪಕ್ಷದ ಇಮೇಜ್ ಹಾಳು ಮಾಡುವುಕ್ಕಾಗಿ ತಿದ್ದಿದ ವಿಡಿಯೋ ಷೇರ್ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಮತ್ತು ಪದಾಧಿಕಾರಿಗಳು ನಡೆಸುತ್ತಿರುವ ತಪ್ಪು ಮಾಹಿತಿ ನೀಡುವ ಮತ್ತು ನಕಲಿ ಸುದ್ದಿ ಹರಡುವ ಕೆಲಸವಾಗಿದೆಯಷ್ಟೇ ಎಂದು ಅವರು ಹೇಳಿದ್ದಾರೆ.
ಬಿ ವಿ ಶ್ರೀನಿವಾಸ್ ಅವರ ಟ್ವೀಟ್
ಬಿಜೆಪಿ ಅಂದರೆ ಹಣದುಬ್ಬರ. ಇದೇ ಜನರು 2014ರಲ್ಲಿ ಹೇಳುತ್ತಿದ್ದರು. ಹಣದುಬ್ಬರ ಮಾಟಗಾತಿಯನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಸ್ಮೃತಿ ಇರಾನಿ ಈಗ ಸ್ವಲ್ಪ ಬದಲಾಗಿದ್ದಾರೆ, ಅವರೀಗ ಕಿವುಡ ಮತ್ತು ಮೂಕರಾಗಿದ್ದಾರೆ. ಅದೇ ಹಣದುಬ್ಬರ ಮಾಟಗಾತಿಯನ್ನು ಇವರು(ಬಿಜೆಪಿ) ಡಾರ್ಲಿಂಗ್ ಮಾಡಿ, ಬೆಡ್‌ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂದು ಬಿ ವಿ ಶ್ರೀನಿವಾಸ್ ಅವರು ಹಿಂದಿಯಲ್ಲಿ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿವೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಸಚಿವೆ ಸ್ಮೃತಿ ಇರಾನಿಯವರ ಹಳೇ ಟ್ವೀಟ್ ವೈರಲ್; ರಸ್ತೆಗಿಳಿಯಿರಿ ಎಂದ ಕಾಂಗ್ರೆಸ್
ತಮ್ಮ ಭಾಷಣದ ಹೇಳಿಕೆಯನ್ನು ತಿದ್ದಿರುವ ವಿಡಿಯೋವನ್ನು ಅಮಿತ್ ಮಾಳವೀಯ ಷೇರ್ ಮಾಡಿದ್ದಾರೆ. ಹಾಗಾಗಿ, ಅವರು ಸಾರ್ವಜನಿಕವಾಗಿಯೂ ಈ ಬಗ್ಗೆ ಕ್ಷಮೆ ಕೋರಬೇಕೆಂದು ಶ್ರೀನಿವಾಸ್ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ನೀವು(ಮಾಳವೀಯ) ಮಾಡಿರುವ ಹೇಳಿಕೆಯ ಕೀಳು ಮಟ್ಟದ್ದು ಮಾತ್ರವಲ್ಲದೇ, ತಪ್ಪು ಮಾಹಿತಿಯಿಂದ ಕೊಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 66E, 66A, 67 ವಿಧಿಗಳು ಮತ್ತು ಐಪಿಸಿಯ ಸೆಕ್ಷನ್ 499, 34, 44, 120, 500 ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.