ತಿರುವನಂತಪುರಂ/ಜೈಪುರ: ಕೇರಳದ ವಯನಾಡು ಈಗ ಅಕ್ಷರಶಃ ಮಸಣದಂತಾಗಿದೆ. ಭಾರಿ ಮಳೆ, ಭೀಕರ ಭೂಕುಸಿತದಿಂದಾಗಿ (Wayanad Landslide) 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಎಲ್ಲೆಂದರಲ್ಲಿ ಶವಗಳು ಸಿಗುತ್ತಿವೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈಗಲೂ ಹಗಲು-ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು, ಭೂಕುಸಿತಕ್ಕೆ ಅರಣ್ಯ ನಾಶ, ರೆಸಾರ್ಟ್‌ಗಳ ನಿರ್ಮಾಣ ಸೇರಿ ಹಲವು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್ ಅಹುಜಾ ಹೇಳಿಕೆ ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. “ವಯನಾಡಿನಲ್ಲಿ ಭೂಕಂಪ ಸಂಭವಿಸಿರುವುದು ಗೋಹತ್ಯೆಯ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯನ್ನು ನಿಲ್ಲಿಸದಿದ್ದದರೆ ಇಂತಹ ಹಲವು ದುರಂತಗಳು ಸಂಭವಿಸುತ್ತಲೇ ಇರುತ್ತವೆ. 2018ರಿಂದಲೂ ನಾನು ಇದನ್ನು ಗಮನಿಸುತ್ತಿದ್ದೇನೆ. ಎಲ್ಲೆಲ್ಲಿ ಗೋವುಗಳ ಹತ್ಯೆಯು ಜಾಸ್ತಿಯಾಗಿರುತ್ತದೆಯೋ, ಅಲ್ಲೆಲ್ಲ ಭೂಕುಸಿತ ಸಂಭವಿಸುತ್ತಿರುತ್ತವೆ. ಕೇರಳದ ವಯನಾಡು ಇದಕ್ಕೆ ನಿದರ್ಶನ” ಎಂದು ಮಾಧ್ಯಮವೊಂದರ ಜತೆ ಮಾತನಾಡುವಾಗ ಅಹುಜಾ ಹೇಳಿದ್ದಾರೆ. ಆದರೆ, ಗೋವುಗಳ ಹತ್ಯೆಗೂ, ಭೂಕುಸಿತಕ್ಕೂ ಹೇಗೆ ನಂಟಿದೆ ಎಂಬುದನ್ನು ಅವರು ವಿವರಿಸಿಲ್ಲ.
ಸಹಾಯಹಸ್ತ ಚಾಚಿದ ಕರ್ನಾಟಕ
ವಯನಾಡು ಭೂಕುಸಿತದಿಂದ ಸಾವಿರಾರು ಜನ ನಿರಾಶ್ರಿತರಾಗಿದ್ದು, ಅವರ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ. “ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಭೂಕುಸಿತದಿಂದ ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಲು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿತ್ತು. ಹೆಚ್.ಡಿ ಕೋಟೆಯಲ್ಲಿ ಗಾಯಾಳುಗಳನ್ನು ಕರೆತಂದು ಅಗತ್ಯ ಚಿಕಿತ್ಸೆ ಕೊಡಿಸಲು ಬಸ್‌ಗಳನ್ನು ಏರ್ಪಡಿಸಲಾಗಿತ್ತು. ಅಗತ್ಯ ಸಲಕರಣೆಗಳನ್ನು ಹೊತ್ತ ಬೆಂಗಳೂರಿನ ಎನ್.ಡಿ.ಆರ್.ಎಫ್ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಸೇನಾಪಡೆಯ ತಂಡಗಳು ವಯನಾಡು ತಲುಪಿದ್ದವು.
ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ