Site icon Vistara News

BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಗೂ ಮೊದಲು ಕಾರ್ಯಕಾರಿ ಅಧ್ಯಕ್ಷರ ನೇಮಕ; ಶೀಘ್ರದಲ್ಲೇ ಆದೇಶ?

BJP

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಕ್ತಾಯಗೊಂಡಿದ್ದು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಇನ್ನು, ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರ ಅಧಿಕಾರದ ಅವಧಿಯು ಕಳೆದ ಜೂನ್‌ನಲ್ಲಿಯೇ ಮುಗಿದಿದೆ. ಅವರನ್ನು ಡಿಸೆಂಬರ್‌ವರೆಗೆ ಮುಂದುವರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಮಧ್ಯೆಯೇ, ಆಗಸ್ಟ್‌ ಅಂತ್ಯದ ವೇಳೆಗೆ ಬಿಜೆಪಿ ನೂತನ ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಸಂಸತ್‌ ಭವನದಲ್ಲಿ ಬುಧವಾರ (ಜುಲೈ 24) ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಮಹತ್ವದ ಸಭೆ ನಡೆಸಿದ್ದು, ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಗೂ ಮೊದಲು, ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸುಮಾರು ಎರಡು ಗಂಟೆ ಸಭೆ ನಡೆದಿದ್ದು, ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಅಮಿತ್‌ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜೆ.ಪಿ.ನಡ್ಡಾ ಅವರು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಮಿತ್‌ ಶಾ ಅವರ ಅಧಿಕಾರದ ಅವಧಿ ಮುಗಿದ ಬಳಿಕ ನಡ್ಡಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈಗಲೂ ಅಷ್ಟೇ, ನಡ್ಡಾ ಅಧಿಕಾರದ ಅವಧಿ ಮುಗಿಯುವ ಮೊದಲು ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಿ, ಅವರಿಗೆ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯ ಜವಾಬ್ದಾರಿ, ಆಡಳಿತ ಸೇರಿ ಹಲವು ಮಾರ್ಗದರ್ಶನ ನೀಡಲಾಗುತ್ತದೆ. ಬಳಿಕ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

2019ರಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸಚಿವರಾದಾಗ ಜೆಪಿ ನಡ್ಡಾ ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ಜವಾಬ್ದಾರಿ ಪ್ರಾರಂಭಿಸಿದರು. ನಡ್ಡಾ 2020ರಲ್ಲಿ ಪೂರ್ಣ ಸಮಯದ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. 2023ರ ಜನವರಿಯಲ್ಲಿ ಜೆ.ಪಿ.ನಡ್ಡಾ ಅವರ ಮೊದಲ ಅವಧಿಯು ಮುಕ್ತಾಯಗೊಂಡಿತ್ತು. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲೂ ಜೂನ್‌ವರೆಗೆ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು.

ಇದನ್ನೂ ಓದಿ: CM Siddaramaiah: ಬಿಜೆಪಿ ತನ್ನ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಿದೆ: ಸಿಎಂ ಸಿದ್ದರಾಮಯ್ಯ

Exit mobile version