ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಿ, ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಬಿಜೆಪಿಯು ಭಾನುವಾರ (ಏಪ್ರಿಲ್ 14) ಪ್ರಣಾಳಿಕೆ ಬಿಡುಗಡೆ (BJP Manifesto) ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಬಿಜೆಪಿ ಬಿಡುಗಡೆ ಮಾಡಿದ ಸಂಕಲ್ಪ ಪತ್ರದಲ್ಲಿ (BJP Sankalp Patra) ನಿರೀಕ್ಷೆಯಂತೆಯೇ ಹಲವು ಘೋಷಣೆಗಳನ್ನು ಮಾಡಲಾಗಿದೆ. ಬಡವರು, ರೈತರು, ಮಹಿಳೆಯರು ಸೇರಿ ಸರ್ವ ಏಳಿಗೆಗಾಗಿ ಬಿಜೆಪಿಯು 14 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಬಡವರು, ಯುವಕರು, ರೈತರು, ಮಹಿಳೆಯರು, ವಂಚಿತರು, ಹಿರಿಯ ನಾಗರಿಕರು ಸೇರಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಸುಮಾರು 14 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಪಸ್ಥಿತರಿದ್ದರು. ಪ್ರಣಾಳಿಕೆ ಬಿಡುಗಡೆಗೂ ಮೊದಲು ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಹರಿಯಾಣದ ರೈತನಿಗೆ, ಘಾಜಿಯಾಬಾದ್‌ನ ಯುವಕನಿಗೆ, ದೆಹಲಿಯ ನಿವಾಸಿಗೆ ಬಿಜೆಪಿಯ ಸಂಕಲ್ಪ ಪತ್ರದ ಪ್ರತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಪ್ರಣಾಳಿಕೆ ರಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಿತಿಯ ಸಂಚಾಲಕಿಯಾಗಿದ್ದರು. ಪಿಯೂಷ್ ಗೋಯಲ್ ಅವರು ಸಹ ಸಂಚಾಲಕರಾಗಿದ್ದರು. ಇನ್ನುಳಿದಂತೆ ಅರ್ಜುನ್ ಮುಂಡಾ, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಹಿಮಂತ ಬಿಸ್ವಾ ಶರ್ಮಾ, ಸ್ಮೃತಿ ಇರಾನಿ, ವಸುಂಧರಾ ರಾಜೆ, ರವಿಶಂಕರ್ ಪ್ರಸಾದ್, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಸೇರಿ ಹಲವರು ಸಮಿತಿಯ ಸದಸ್ಯರಾಗಿದ್ದರು.
ಇದನ್ನೂ ಓದಿ: Modi In Karnataka: ರಾಜ್ಯದಲ್ಲಿ ಇಂದು ಮೋದಿ ಅಬ್ಬರ; ಮೈಸೂರು, ಮಂಗಳೂರಿನಲ್ಲಿ ಪ್ರಚಾರ