ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024) ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಈ ಮಧ್ಯೆ ಭಾರತೀಯ ಜನತಾ ಪಕ್ಷ (BJP) 2024ರ ಲೋಕಸಭಾ ಚುನಾವಣೆಗೆ ತನ್ನ ಪ್ರಣಾಳಿಕೆ (BJP Manifesto) ಅಥವಾ ‘ಸಂಕಲ್ಪ ಪತ್ರ’ (Sankalp Patra)ವನ್ನು ಇಂದು (ಏಪ್ರಿಲ್ 14) ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಮ್ಮುಖದಲ್ಲಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕಿಸಾನ್ ಸಮ್ಮಾನ್ ನಿಧಿಯನ್ನು 3 ಸಾವಿರ ರೂ.ಗೆ ಏರಿಕೆ ಮಾಡುವುದು ಸೇರಿ ಹಲವು ಘೋಷಣೆಗಳು ಇರಲಿವೆ ಎಂದು ಹೇಳಲಾಗುತ್ತಿದೆ.
ಪ್ರಣಾಳಿಕೆಯಲ್ಲಿ ಏನಿರಲಿದೆ?
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಇದೀಗ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿರಬಹುದು ಎನ್ನುವ ಕುತೂಹಲ ಮೂಡಿದೆ. ಬಿಜೆಪಿಯ ಪ್ರಣಾಳಿಕೆಯು ದೇಶದ ಎಲ್ಲ ವರ್ಗಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಸಾಧ್ಯತೆಯಿದೆ. ಇದು ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಮಹಿಳೆಯರು, ಯುವಕರು, ಬಡವರು ಮತ್ತು ರೈತರ ಬಗ್ಗೆ ಒತ್ತು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ʼʼಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದೆʼʼ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿ ಪ್ರಣಾಳಿಕೆ ʼಮೋದಿ ಅವರ ಗ್ಯಾರಂಟಿ: 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶʼ ಎಂಬ ಅಂಶವನ್ನು ಪ್ರಧಾನವಾಗಿರಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ
ʼʼವಿಶೇಷ ಎಂದರೆ ನಾಳೆ ದಲಿತ ಸಮುದಾಯದ ಶ್ರೇಷ್ಠ ನಾಯಕ ಮತ್ತು ಭಾರತೀಯ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವೂ ಹೌದು. ಪ್ರಣಾಳಿಕೆ ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ ಜತೆಗೆ ಇತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆʼʼ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಮಿತಿಯಲ್ಲಿ ಯಾರಿದ್ದಾರೆ?
ಜನರ ಸಲಹೆಗಳನ್ನು ಪಡೆಯಲು ದೇಶಾದ್ಯಂತ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ನಡೆಸಲಾಗಿತ್ತು. ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಿತಿಯ ಸಂಚಾಲಕಿಯಾಗಿದ್ದಾರೆ. ಪಿಯೂಷ್ ಗೋಯಲ್ ಅವರು ಸಹ ಸಂಚಾಲಕರಾಗಿದ್ದಾರೆ. ಇನ್ನುಳಿದಂತೆ ಅರ್ಜುನ್ ಮುಂಡಾ, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಹಿಮಂತ ಬಿಸ್ವಾ ಶರ್ಮಾ, ಸ್ಮೃತಿ ಇರಾನಿ, ವಸುಂಧರಾ ರಾಜೆ, ರವಿಶಂಕರ್ ಪ್ರಸಾದ್, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಸೇರಿ ಹಲವರು ಸಮಿತಿಯ ಸದಸ್ಯರಾಗಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ರಾಮಮಂದಿರ, 370ನೇ ವಿಧಿ ರದ್ದುಗೊಳಿಸುವುದು ಸೇರಿ ಹಲವು ಪ್ರಮುಖ ವಿಷಯಗಳನ್ನು ಸೇರಿಸಿತ್ತು. ಆ ಭರವಸೆಗಳನ್ನು ಈಡೇರಿಸಿದ ಕಾರಣ ಹೊಸ ಅಂಶಗಳು ಏನಿರಲಿವೆ ಎಂಬ ಕುತೂಹಲ ಇದೆ. ಒಟ್ಟು ಏಳು ಹಂತದಲ್ಲಿ ಮತದಾನ ನಡೆದು ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ.