ತಿರುವನಂತಪುರಂ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಬಿಜೆಪಿ ಸದೃಢವಾಗಿರುವ ರಾಜ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ಇನ್ನಷ್ಟು ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸುವುದು ಹಾಗೂ ಪಕ್ಷ ಸಬಲವಾಗಿರದ ರಾಜ್ಯಗಳಲ್ಲಿ ದುಪ್ಪಟ್ಟು ಶ್ರಮ ವಹಿಸಲು ಸೂಚಿಸಲಾಗಿದೆ. ಅದರಲ್ಲೂ, ಬಿಜೆಪಿಗೆ ನೆಲೆಯಿಲ್ಲದ ಕೇರಳದಲ್ಲಿ ಈ ಬಾರಿ ಶತಾಯಗತಾಯ ಮುನ್ನಡೆ ಸಾಧಿಸಲು ಬಿಜೆಪಿ ರಣತಂತ್ರ (BJP Master Plan In Kerala) ರೂಪಿಸಿದೆ. ಅದರಲ್ಲೂ, ಶೇ.46ರಷ್ಟು ಜನಸಂಖ್ಯೆ ಇರುವ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಸೆಳೆಯಲು ಕಮಲ ಪಾಳಯ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜನರ ಬಳಿಗೆ ಕಾರ್ಯಕರ್ತರು
ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿ ನೀಡುವ ಮೂಲಕ ಅವರ ಮನಗೆಲ್ಲಲು ಬಿಜೆಪಿ ಯೊಜನೆ ರೂಪಿಸಿದೆ. ಏಪ್ರಿಲ್ 9ರಂದು ಕ್ರಿಶ್ಚಿಯನ್ನರ ಪವಿತ್ರ ಈಸ್ಟರ್ ಇದೆ. ಇದೇ ದಿನ ಬಿಜೆಪಿಯ 10 ಸಾವಿರ ಕಾರ್ಯಕರ್ತರು ರಾಜ್ಯಾದ್ಯಂತ ಸುಮಾರು 1 ಲಕ್ಷ ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಹಾಗೆಯೇ, ಇದೇ ತಿಂಗಳ ಮೂರನೇ ವಾರ ನಡೆಯುವ ಮುಸ್ಲಿಮರ ಈದ್ ಹಬ್ಬದ ದಿನ ಬಿಜೆಪಿ ಕಾರ್ಯಕರ್ತರು ಮುಸ್ಲಿಮರ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದು ನರೇಂದ್ರ ಮೋದಿ ಯೋಜನೆ
2024ರ ಲೋಕಸಭೆ ಹಾಗೂ ಕೇರಳದಲ್ಲಿ 2026ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮೋದಿ ಅವರೇ ಈ ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯು ಕ್ರಿಶ್ಚಿಯನ್ನರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಂತೆ, ಕೇರಳದಲ್ಲೂ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಮತಗಳನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲಾಗಿದೆ.
ಇದನ್ನೂ ಓದಿ: BJP Muslim Outreach Plan: 14 ರಾಜ್ಯ, 64 ಜಿಲ್ಲೆ, 60 ಲೋಕಸಭೆ ಕ್ಷೇತ್ರ; ಮುಸ್ಲಿಮರ ಮತ ಸೆಳೆಯಲು ಬಿಜೆಪಿ ಯೋಜನೆ ಏನು?
ಹೈದರಾಬಾದ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೇ ಕೇರಳದ ಮಾಸ್ಟರ್ ಪ್ಲಾನ್ ಕುರಿತು ಮುಖಂಡರು ಕಾರ್ಯಕರ್ತರಿಗೆ ಮೋದಿ ತಿಳಿಸಿದ್ದಾರೆ. ಕೇರಳದಲ್ಲಿ ಸ್ನೇಹ ಸಂವಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಸೆಳೆಯಬೇಕು ಎಂಬುದಾಗಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಕೇರಳದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದ ಫಲಾನುಭವಿಗಳು ವಿಡಿಯೊ ಮಾಡುವ ʼಥ್ಯಾಂಕ್ ಮೋದಿʼ ಅಭಿಯಾನವನ್ನೂ ಬಿಜೆಪಿ ಈಗಾಗಲೇ ಕೈಗೊಂಡಿದೆ.