ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಹಾಗಾಗಿ, ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿ ಎಲ್ಲ ಪಕ್ಷಗಳು ಎರಡೂ ರಾಜ್ಯಗಳಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದರಲ್ಲೂ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಬೆನ್ನಲ್ಲೇ ಇಂಡಿಯಾ ಟಿವಿ-ಮ್ಯಾಟ್ರಿಜ್ (Opinion Poll) ಸಂಸ್ಥೆಗಳು ಚುನಾವಣೆ ಪೂರ್ವ ಸಮೀಕ್ಷೆ ನಡೆಸಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಗುಜರಾತ್‌ನಲ್ಲಿ ಏನಾಗುತ್ತದೆ?
ಇಂಡಿಯಾ ಟಿವಿ-ಮ್ಯಾಟ್ರಿಜ್ (India TV-Matrize) ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಉಳಿಯಲಿದೆ. 182 ಸ್ಥಾನಗಳ ಪೈಕಿ ಬಿಜೆಪಿಯು 119 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆಯಲಿದೆ. ಕಾಂಗ್ರೆಸ್ 59, ಆಪ್ ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಸುಮಾರು 91 ಸಾವಿರ ಜನರನ್ನು ಸಂಪರ್ಕಿಸಿ ಗುಜರಾತ್‌ನಲ್ಲಿ ಸಮೀಕ್ಷೆ ತಯಾರಿಸಿದೆ. 2017ರಲ್ಲಿ ಬಿಜೆಪಿ 99 ಹಾಗೂ ಕಾಂಗ್ರೆಸ್ 81 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಡಿಸೆಂಬರ್ 1 ಹಾಗೂ 5ರಂದು ಸೇರಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಹಿಮಾಚಲ ಪ್ರದೇಶದ ಸಮೀಕ್ಷಾ ವರದಿ ಏನು?
ಹಿಮಾಚಲ ಪ್ರದೇಶದಲ್ಲಿಯೂ ಬಿಜೆಪಿಯೇ ಪ್ರಾಬಲ್ಯ ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಒಟ್ಟು 68 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ 41 ಕ್ಷೇತ್ರದಲ್ಲಿ ಬಿಜೆಪಿ ಜಯಿಸಲಿದೆ. ಉಳಿದಂತೆ ಕಾಂಗ್ರೆಸ್ 25, ಇತರೆ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಜಯಿಸಿತ್ತು. ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇರುವುದು ಬಿಜೆಪಿಗೆ ಮುನ್ನಡೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ | Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ