Site icon Vistara News

Sunil Kamble: ಪೊಲೀಸ್‌ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕ; ದರ್ಪದ ವಿಡಿಯೊ ಇದೆ

Sunil Kamble Slaps Cop

BJP MLA Sunil Kamble slaps cop at public event in Pune; Video Goes Viral

ಮುಂಬೈ: ರಾಜಕಾರಣಿಗಳು ಎಷ್ಟು ನಯವಾಗಿ ಮಾತನಾಡುತ್ತಾರೋ ಅಷ್ಟೇ ಅಹಂಕಾರಿಗಳಾಗಿರುತ್ತಾರೆ. ಚುನಾವಣೆ ವೇಳೆ ಜನರ ಕೈಕಾಲು ಹಿಡಿಯುವ ರಾಜಕಾರಣಿಗಳು ಗೆದ್ದು ಬಂದ ಮೇಲೆ ಅದೇ ಮತದಾರರ ಮೇಲೆ, ಅಧಿಕಾರಿಗಳ ಮೇಲೆ ದರ್ಪ ತೋರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕ ಸುನೀಲ್‌ ಕಾಂಬ್ಳೆ (Sunil Kamble) ಅವರು ಪೊಲೀಸ್‌ ಅಧಿಕಾರಿಯೊಬ್ಬರಿಗೆ (Cop) ಕಪಾಳಮೋಕ್ಷ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಸುನೀಲ್‌ ಕಾಂಬ್ಳೆ ದುರಹಂಕಾರ ಪ್ರದರ್ಶಿಸಿದ್ದು, ಈ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಸಸೂನ್‌ ಆಸ್ಪತ್ರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದ ವೇಳೆ ಸುನೀಲ್‌ ಕಾಂಬ್ಳೆ ಅವರು ಪೊಲೀಸ್‌ ಅಧಿಕಾರಿಯೊಬ್ಬರ ಕಪಾಳಕ್ಕೆ ಹೊಡೆದಿದ್ದಾರೆ. ಸುನೀಲ್‌ ಕಾಂಬ್ಳೆ ಅವರು ವೇದಿಕೆಯಿಂದ ಇಳಿಯುತ್ತಿದ್ದರು. ಇದೇ ವೇಳೆ ಸುನೀಲ್‌ ಕಾಂಬ್ಳೆ ಅವರ ಮೈಯನ್ನು ಪೊಲೀಸ್‌ ಅಧಿಕಾರಿ ಮುಟ್ಟಿದ್ದಾರೆ. ಇದೇ ಕಾರಣಕ್ಕೆ ಕುಪಿತಗೊಂಡ ಸುನೀಲ್‌ ಕಾಂಬ್ಳೆ, ಅವರ ಕಪಾಳಕ್ಕೆ ಹೊಡೆದಿದ್ದಾರೆ. ಬಿಜೆಪಿ ಶಾಸಕ ಪ್ರದರ್ಶಿಸಿದ ದುರಹಂಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮುಖ್ಯ ಅತಿಥಿಯಾಗಿದ್ದರು. ಅವರ ಸಮ್ಮುಖದಲ್ಲಿಯೇ ಇಂತಹ ಘಟನೆ ನಡೆದಿದೆ.

ಹೊಡೆದಿಲ್ಲ, ತಳ್ಳಿದೆ ಎಂದು ಸ್ಪಷ್ಟನೆ

ಸುನೀಲ್‌ ಕಾಂಬ್ಳೆ ಅವರು ಸಾರ್ವಜನಿಕವಾಗಿ ದುರ್ವರ್ತನೆ ತೋರಿದ ವಿಡಿಯೊ ಭಾರಿ ವೈರಲ್‌ ಆಗಿ, ಜನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ತಮ್ಮ ಕೃತ್ಯದ ಕುರಿತು ಶಾಸಕ ಸಮಜಾಯಿಷಿ ನೀಡಿದ್ದಾರೆ. “ನಾನು ಪೊಲೀಸ್‌ ಅಧಿಕಾರಿಗೆ ಹೊಡೆದಿಲ್ಲ. ವೇದಿಕೆ ಮೇಲಿನಿಂದ ಇಳಿಯುವಾಗ ಪೊಲೀಸ್‌ ಅಧಿಕಾರಿಯು ನನ್ನ ಮೈಮೇಲೆ ಬಿದ್ದರು. ನಾನು ಆಗ ಅವರನ್ನು ತಳ್ಳಿದೆ ಅಷ್ಟೆ. ಅವರ ಮೇಲೆ ಕೈ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿಯ ಕಪಾಳಕ್ಕೆ ಹೊಡೆಯುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Congress MLA: ಕಾಂಗ್ರೆಸ್‌ ಶಾಸಕನಿಗೆ ಇ.ಡಿ ಶಾಕ್;‌ 5 ಕೋಟಿ ರೂ. ಜಪ್ತಿ, ಶಸ್ತ್ರಾಸ್ತ್ರ ವಶ

ಸುನೀಲ್‌ ಕಾಂಬ್ಳೆ ಅವರ ಸಾರ್ವಜನಿಕವಾಗಿ ದುರ್ವರ್ತನೆ ತೋರುವುದು, ಅಹಂಕಾರ ಪ್ರದರ್ಶಿಸುವುದೇ ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದಷ್ಟೇ ಪುಣೆ ಮುನ್ಸಿಪಲ್‌ ಕಾರ್ಪೊರೇಷನ್‌ನಲ್ಲಿರುವ ಮಹಿಳಾ ಸಹೋದ್ಯೋಗಿಗೆ ಸುನೀಲ್‌ ಕಾಂಬ್ಳೆ ಕಿರುಕುಳ ನೀಡಿದ ವಿಡಿಯೊ ವೈರಲ್‌ ಆಗಿತ್ತು. ಇನ್ನು ಸುನೀಲ್‌ ಕಾಂಬ್ಳೆ ಅವರು ಕರ್ತವ್ಯನಿರತ ಪೊಲೀಸ್‌ ಅಧಿಕಾರಿಯ ಕೆನ್ನೆಗೆ ಬಾರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version