ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರ ಆಪ್ತನು ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಸುದ್ದಿಯಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪುತ್ರನು (BJP MLA Son) ಆದಿವಾಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ತಲೆಮರೆಸಿಕೊಂಡಿದ್ದಾನೆ.
ಸಿಂಗ್ರೌಲಿ ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ ವೈಶ್ಯ (40) ಎಂಬಾತನು ಸೂರ್ಯಕುಮಾರ್ ಖೈರ್ವಾರ್ ಎಂಬ ಆದಿವಾಸಿ ವ್ಯಕ್ತಿಯ ಕೈಗೆ ಗುಂಡು ಹಾರಿಸಿದ್ದಾನೆ. ಆಗಸ್ಟ್ 3ರಂದು ಗುಂಡಿನ ದಾಳಿ ನಡೆಸಿದ್ದು, ಕೂಡಲೇ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ವಿವೇಕಾನಂದ ವೈಶ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೂರ್ಯಕುಮಾರ್ ಖೈರ್ವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ವಿವೇಕಾನಂದ ವೈಶ್ಯನ ಕುರಿತು ಮಾಹಿತಿ ನೀಡಿದವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಗುಂಡಿನ ದಾಳಿ ಏಕೆ?
ಸಿಂಗ್ರೌಲಿ ಜಿಲ್ಲೆಯ ಕಡಿದಾದ ರಸ್ತೆಯೊಂದರಲ್ಲಿ ಗುರುವಾರ ಸಂಜೆ 5.30ರ ಸುಮಾರಿಗೆ ವಿವೇಕಾನಂದ ವೈಶ್ಯ ಅವರು ಕಾರು ಚಲಿಸುವಾಗ ಎದುರಿನಿಂದ ಸೂರ್ಯಕುಮಾರ್ ಖೈರ್ವಾರ್ ಅವರು ಸಹೋದರರ ಜತೆ ಆಗಮಿಸಿದ್ದಾರೆ. ಇದೇ ವೇಳೆ ದಾರಿ ಬಿಡುವ ವಿಚಾರಕ್ಕೆ ವಿವೇಕಾನಂದ ವೈಶ್ಯ ಹಾಗೂ ಸೂರ್ಯಕುಮಾರ್ ಖೈರ್ವಾರ್ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಇದೇ ವೇಳೆ, ಕುಪಿತಗೊಂಡ ವಿವೇಕಾನಂದ ವೈಶ್ಯ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: West Bengal Horror: ಮಣಿಪುರ ಬೆನ್ನಲ್ಲೇ ಬಂಗಾಳದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಬೆತ್ತಲೆ ಮೆರವಣಿಗೆ
ವಿವೇಕಾನಂದ ವೈಶ್ಯನ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಜತೆ ಜಗಳವಾಡಿ, ಅವರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾನೆ. ಈಗ ಮತ್ತೆ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇನ್ನು ಪ್ರಕರಣ ಸುದ್ದಿಯಾಗುತ್ತಲೇ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲ್ ನಾಥ್ ಆಕ್ರೋಶ
“ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಲು ಬಿಜೆಪಿಯವರ ಮಧ್ಯೆಯೇ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕೆಲ ದಿನಗಳ ಹಿಂದೆ ಸಿದ್ಧಿ ಸಮುದಾಯದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು. ಈಗ ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ ವೈಶ್ಯನು ಆದಿವಾಸಿ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಆದಿವಾಸಿ ವ್ಯಕ್ತಿ ಗುಣಮುಖನಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಆಗ್ರಹಿಸುತ್ತೇನೆ” ಎಂದು ಕಮಲ್‌ನಾಥ್ ಟ್ವೀಟ್ ಮಾಡಿದ್ದಾರೆ.