Site icon Vistara News

Jagdeep Dhankhar: ಉಪ ರಾಷ್ಟ್ರಪತಿಗೆ ಎನ್‌ಡಿಎ ಸದಸ್ಯರ ಬೆಂಬಲ, ಒಂದು ಗಂಟೆ ನಿಂತು ವಿಶಿಷ್ಟ ಪ್ರತಿಭಟನೆ

tmc MP mimicry

ಹೊಸದಿಲ್ಲಿ: ಉಪ ರಾಷ್ಟ್ರಪತಿ (Vice President) ಜಗದೀಪ್ ಧನ್‌ಕರ್‌ (Jagdeep Dhankhar)‌ ಅವರನ್ನು ತೃಣಮೂಲ ಸಂಸದ (TMC MP) ಮಿಮಿಕ್ರಿ ಮಾಡಿರುವ ವಿವಾದದ ನಡುವೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ರಾಜ್ಯಸಭಾ ಸಂಸದರು ಉಪ ರಾಷ್ಟ್ರಪತಿಯೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ವಿಶಿಷ್ಟ ಪ್ರತಿಭಟನೆಯನ್ನು ನಡೆಸಲಿದ್ದಾರೆ. 109 ಎನ್‌ಡಿಎ ಸದಸ್ಯರು (NDA MP) ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಧನ್‌ಕರ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಒಂದು ಗಂಟೆ ಕಾಲ ಸದನದಲ್ಲಿ ನಿಲ್ಲಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಭದ್ರತೆ ಲೋಪದ ಕುರಿತು ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿಕೆಗೆ ಆಗ್ರಹಿಸಿ ವಿಪಕ್ಷ ಸದಸ್ಯರು ಎಬ್ಬಿಸಿದ ಗದ್ದಲದ ಸಂದರ್ಭ ಅಶಿಸ್ತಿನ ವರ್ತನೆಗಾಗಿ ಸಂಸತ್ತಿನಿಂದ 49 ಸದಸ್ಯರನ್ನು ಹೊರಹಾಕಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ತಿನ ಹೊರಗೆ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆ ಅಧ್ಯಕ್ಷರನ್ನು ಅಣಕಿಸಿ ತೋರಿಸಿದ್ದು, ಇದನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಕಲ್ಯಾಣ್ ಬ್ಯಾನರ್ಜಿ, “ನನ್ನ ಬೆನ್ನುಮೂಳೆಯು ತುಂಬಾ ನೇರವಾಗಿದೆ, ನಾನು ತುಂಬಾ ಎತ್ತರವಾಗಿದ್ದೇನೆ” ಎಂದು ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸೇರಿದಂತೆ ಇತರ ವಿಪಕ್ಷ ಸಂಸದರು ನಗುತ್ತಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್‌ನ ಇನ್‌ಸ್ಟಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಬಳಿಕ ಅದನ್ನು ಡಿಲೀಟ್‌ ಮಾಡಲಾಗಿದೆ.

ಸಂಸತ್ತಿನ ಹೊರಗೆ ತಮ್ಮನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ತಾವು ಅನುಭವಿಸಿದ ನೋವನ್ನು ಉಪ ರಾಷ್ಟ್ರಪತಿ ಸದನದಲ್ಲಿ ಬುಧವಾಋ ಹಂಚಿಕೊಂಡರು. ಇದು ರಾಜ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದರು. “ಸಂಸತ್ತಿನ ಹಿರಿಯ ಸದಸ್ಯರೊಬ್ಬರು ತಮ್ಮನ್ನು ಅಣಕವಾಡಿ, ಅದನ್ನು ಇನ್ನೊಬ್ಬ ಸದಸ್ಯರನ್ನು ವೀಡಿಯೊಗ್ರಾಫ್ ಮಾಡುತ್ತಾರೆ. ಏಕೆ? ನಾನು ತುಂಬಾ ನೋವನ್ನು ಅನುಭವಿಸಿದ್ದೇನೆ. ಈ ಸದನದ ಬಗ್ಗೆ ಜನ ಯಾವ ರೀತಿಯ ಭಾವನೆ ಹೊಂದಿದ್ದಾರೆಂದು ನಿಮಗೆ ತಿಳಿದಿಲ್ಲ. ಇಂದು ನಾವು ಅದರ ಅತ್ಯಂತ ಕೆಳಮಟ್ಟವನ್ನು ನೋಡುತ್ತಿದ್ದೇವೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರನ್ನು ಉದ್ದೇಶಿಸಿ ಧನ್‌ಕರ್‌ ಮಾತನಾಡಿದರು. “ಮಿಸ್ಟರ್ ಚಿದಂಬರಂ, ನೀವು ತುಂಬಾ ಹಿರಿಯ ಸದಸ್ಯರು. ನಿಮ್ಮ ಪಕ್ಷದ ಹಿರಿಯ ಸಂಸದರೊಬ್ಬರು ಸ್ಪೀಕರ್‌ ಆದ ನನ್ನನ್ನು ಗೇಲಿ ಮಾಡುವ ವೀಡಿಯೊ ಮಾಡಿದರು. ನನ್ನ ಹೃದಯದಲ್ಲಿ ಏನಾಗುತ್ತಿದೆ ಎಂದು ಊಹಿಸಿ. ಇದು ವೈಯಕ್ತಿಕ ದಾಳಿ. ಇದು ಕೇವಲ ರೈತ ಸಮುದಾಯಕ್ಕೆ ಮಾಡಿದ ಅವಮಾನವಲ್ಲ; ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ. ಅದೂ ಕೂಡ ಇಷ್ಟು ದಿನ ಆಡಳಿತ ನಡೆಸಿದ ರಾಜಕೀಯ ಪಕ್ಷದ ಸದಸ್ಯರಿಂದ ನಡೆದಿದೆ ಎಂಬುದು ನಂಬಲಾಗುತ್ತಿಲ್ಲ” ಎಂದು ಆಕ್ಷೇಪಿಸಿದರು.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಪಕ್ಷದ ಕ್ರಮವನ್ನು ಅವರು “ನಾಚಿಕೆಗೇಡಿನ ಕೃತ್ಯ” ಎಂದು ಕರೆದಿದ್ದಾರೆ. “ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪಕ್ಷವು ವೀಡಿಯೊವನ್ನು ಪೋಸ್ಟ್ ಮಾಡಿತ್ತು. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ನೀವು ಪಕ್ಷದ ಅಧಿಕೃತ ವಕ್ತಾರರನ್ನು ಬಳಸಿಕೊಂಡು ನನ್ನನ್ನು, ನನ್ನ ರೈತನ ಹಿನ್ನೆಲೆಯನ್ನು, ಜಾಟ್‌ ಹಿನ್ನೆಲೆಯನ್ನು, ರಾಜ್ಯಸಭೆ ಅಧ್ಯಕ್ಷ ಸ್ಥಾನವನ್ನು ಅವಮಾನಿಸಿದ್ದೀರಿ” ಎಂದು ಅವರು ಹೇಳಿದರು.

ಅಮಾನತುಗೊಂಡ ವಿರೋಧ ಪಕ್ಷದ ಸಂಸದರಲ್ಲಿ ಒಬ್ಬರಾದ ಬ್ಯಾನರ್ಜಿ ಅವರು ಸಂಸತ್ತಿನ ಮಕರ ದ್ವಾರದಲ್ಲಿ ರಾಜ್ಯಸಭಾ ಅಧ್ಯಕ್ಷರನ್ನು ಅಪಹಾಸ್ಯ ಮಾಡುತ್ತಿರುವುದು ಹಾಗೂ ಈ ಕೃತ್ಯವನ್ನು ಗಾಂಧಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿರುವುದು ನಿನ್ನೆ ಕಂಡುಬಂದಿತ್ತು. ನಂತರ ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗ ಇದನ್ನು ಧನ್‌ಕರ್‌ ತೀವ್ರವಾಗಿ ಖಂಡಿಸಿದ್ದರು. “ಸಭಾಧ್ಯಕ್ಷರ ಕಚೇರಿ, ರಾಜ್ಯಸಭೆ ಅಧ್ಯಕ್ಷರ ಸ್ಥಾನ ತುಂಬಾ ವಿಭಿನ್ನವಾದುದು. ಈಂಥ ಸ್ಥಾನವನ್ನು ಅಣಕಿಸುವುದು ಎಷ್ಟು ಹಾಸ್ಯಾಸ್ಪದ, ಎಷ್ಟು ನಾಚಿಕೆಗೇಡಿನ ಕೃತ್ಯ! ಇದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಬುದ್ಧಿಗೇಡಿತನ; ತಮ್ಮನ್ನು ಟಿಎಂಸಿ ಎಂಪಿ ಅಣಕಿಸಿದ್ದನ್ನು ವಿಡಿಯೊ ಮಾಡಿದ ರಾಹುಲ್ ಗಾಂಧಿಗೆ ಉಪ ರಾಷ್ಟ್ರಪತಿ ತರಾಟೆ

Exit mobile version