Site icon Vistara News

ದಕ್ಷಿಣ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು, ನಾಳೆಯಿಂದ ಹೈದರಾಬಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ

BJP Executive

ನವ ದೆಹಲಿ: ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿಕೊಂಡು ಬೀಗುತ್ತಿರುವ ಭಾರತೀಯ ಜನತಾ ಪಕ್ಷ ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ತೆಲಂಗಾಣದ ಮೇಲೆ ಅದರ ದೃಷ್ಟಿ ನೆಟ್ಟಿದೆ. ಇದರ ಭಾಗವಾಗಿಯೇ ಹೈದರಾಬಾದ್‌ನಲ್ಲಿ ಜುಲೈ 2 ಮತ್ತು 3ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಆಯೋಜಿಸಲಾಗಿದೆ.

ಸಾಮಾನ್ಯವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ದಿಲ್ಲಿಯಲ್ಲೇ ನಡೆಯುತ್ತದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದು ಹೈದರಾಬಾದ್‌ನಲ್ಲಿ ಕಾರ್ಯಕಾರಿಣಿ ನಡೆಸುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣದ ರಾಜ್ಯದಲ್ಲಿ ನಡೆಯುತ್ತಿರುವ ಮೂರನೇ ಕಾರ್ಯಕಾರಿಣಿ ಇದಾಗಿದೆ. ಅದರಲ್ಲೂ ಹೈದರಾಬಾದ್‌ನಲ್ಲಿ ಇಂಥಹುದೊಂದು ಕಾರ್ಯಕಾರಿಣಿ ನಡೆಯುತ್ತಿರುವುದು 18 ವರ್ಷದ ನಂತರ.

ಏನೇನು ಅಜೆಂಡಾ?
ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷದ ಶಕ್ತಿ ಅಷ್ಟೇನಿಲ್ಲ. ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ ಮೂರು ಮಾತ್ರ. ನಲವತ್ತು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದೆ. ಹೈದರಾಬಾದ್‌ ಮಹಾನಗರ ಪಾಲಿಕೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿದೆ. ಇಂಥ ರಾಜ್ಯದಲ್ಲಿ ಬಿಜೆಪಿಗೆ ಬೆಳೆಯಲು ಎಲ್ಲ ಅವಕಾಶಗಳಿವೆ ಎನ್ನುವುದು ಪಕ್ಷದ ಲೆಕ್ಕಾಚಾರ.

ಹಾಗಾಗಿ ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಆಯೋಜಿಸಲಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಇದೊಂದು ಆಯಕಟ್ಟಿನ ಪ್ರದೇಶ ಎಂದು ಬಿಜೆಪಿ ಪರಿಗಣಿಸಿದೆ. ಬಿಜೆಪಿ ತೆಲಂಗಾಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂಬ ಕಾರಣಕ್ಕಾಗಿಯೇ ತೆಲಂಗಾಣದ ಮುಖ್ಯಮಂತ್ರಿ, ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಅವರು ತಲ್ಲಣಗೊಂಡಿದ್ದಾರೆ. ಅದೇ ದೃಷ್ಟಿಯಿಂದ ಅವರು ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪಕ್ಷಗಳ ಕೂಟ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. 2024ರಲ್ಲಿ ಹೇಗೂ ಸಾರ್ವತ್ರಿಕ ಚುನಾವಣೆ ಇದೆ. ಇವೆರಡನ್ನೂ ಸೇರಿಸಿ ಈಗಿನಿಂದಲೇ ಪ್ರಚಾರ ಆರಂಭಿಸುವುದು ಬಿಜೆಪಿ ಪ್ಲ್ಯಾನ್‌.

ಹಿರಿಯ ನಾಯಕರ ಆಗಮನ
ರಾಷ್ಟ್ರೀಯ ಕಾರ್ಯಕಾರಿಣಿಗಾಗಿ ಬಿಜೆಪಿ ಹಿರಿಯ ನಾಯಕರು ಈಗಾಗಲೇ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಬಿಜೆಪಿಯ ದೊಡ್ಡ ಹಬ್ಬವೇ ಇಲ್ಲಿ ಮೇಳೈಸಲಿದೆ. ಕಾರ್ಯಕಾರಿಣಿಯ ಆರಂಭ ದಿನವಾದ ಜುಲೈ 2ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ವಾಹನ ಜಾಥಾ ನಡೆಯಲಿದೆ. ಜುಲೈ ಮೂರರಂದು ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿ ದೊಡ್ಡ ಮಟ್ಟದ ರ‍್ಯಾಲಿ ನಡೆಸಲಿದ್ದಾರೆ. ತೆಲಂಗಾಣದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ದೊಡ್ಡ ಮಟ್ಟದ ರ‍್ಯಾಲಿ ಇದಾಗಿದ್ದು, ಎಲ್ಲರ ಗಮನ ಸೆಳೆಯಲಿದೆ. ಮುಂದಿನ ದಿನಗಳಲ್ಲಿ ಇಂಥಹುದೇ ರ‍್ಯಾಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ.

ವಿಧಾನಸಭಾ ಚುನಾವಣೆಗೂ ತಯಾರಿ
ಈ ಕಾರ್ಯಕಾರಿಣಿಯಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ವರ್ಷ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. 2023ರಲ್ಲಿ ಕರ್ನಾಟಕ, ನಾಗಾಲ್ಯಾಂಡ್‌, ಮೇಘಾಲಯ, ತ್ರಿಪುರ, ಛತ್ತೀಸ್‌ ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣಗಳಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ| ಲಂಡನ್‌ನಲ್ಲಿ ಸರ್ಜರಿಗೆ ಒಳಗಾದ ಕ್ಯಾ. ಅಮರಿಂದರ್‌ ಸಿಂಗ್‌; ವಾಪಸ್‌ ಬರುತ್ತಿದ್ದಂತೆ ಬಿಜೆಪಿ ಸೇರ್ಪಡೆ

Exit mobile version