ಪಟನಾ: ಬಿಹಾರದಲ್ಲಿ ಜೆಡಿಯು-ಆರ್ಜೆಡಿ-ಕಾಂಗ್ರೆಸ್ನ ಮಹಾ ಘಟ್ ಬಂಧನ್ ಸರ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ಅಸ್ತಿತ್ವಕ್ಕೆ ಬರಲಿದೆ. ರಾಜಭವನದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಿತೀಶ್ ಕುಮಾರ್ 8ನೇ ಬಾರಿಗೆ ಸಿಎಂ ಹುದ್ದೆಗೇರಲಿರುವುದು ವಿಶೇಷ. ಗೃಹ ಇಲಾಖೆ ಕೂಡ ತನಗೇ ಬೇಕು ಎಂದು ಆರ್ಜೆಡಿಯ ತೇಜಸ್ವಿ ಯಾದವ್ ಕೇಳಿದ್ದರೂ, ನಿತೀಶ್ ಕುಮಾರ್ ಅದನ್ನು ಕೊಡಲು ಒಪ್ಪಿಲ್ಲ. ಗೃಹ ಖಾತೆಯನ್ನು ತಾವೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಪೀಕರ್ ಸ್ಥಾನ ಆರ್ಜೆಡಿಗೆ ದಕ್ಕಲಿದೆ.
ಇಂದು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಜತೆ ಒಟ್ಟು 32 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದರಲ್ಲಿ ಕಾಂಗ್ರೆಸ್ಗೆ 4 ಸ್ಥಾನ, ಆರ್ಜೆಡಿಗೆ 16 ಸ್ಥಾನ ಕೊಡಲಾಗಿದ್ದು, ಜೆಡಿಯು ಪಕ್ಷದ 13 ಶಾಸಕರಿಗೆ ಅವಕಾಶ ಸಿಗಲಿದೆ. ಇಂದು ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬುದರ ಪಟ್ಟಿ ಇನ್ನೂ ಹೊರಬಿದ್ದಿಲ್ಲ. ಒಟ್ಟಾರೆ ಮಹಾ ಘಟ್ ಬಂಧನ್ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹೊಸ ಸರ್ಕಾರ ರಚನೆಯ ಸಂಭ್ರಮವೂ ಮನೆ ಮಾಡಿದೆ.
ಬಿಜೆಪಿ ಪ್ರತಿಭಟನೆ
ಇನ್ನೊಂದೆಡೆ ಬಿಹಾರದಲ್ಲಿ ಬಿಜೆಪಿ, ಮಹಾ ಘಟ್ ಬಂಧನ್ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದೆ. ನಿತೀಶ್ ಕುಮಾರ್ ಅವರು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಇಂದು (ಆಗಸ್ಟ್ 10) ಇಡೀ ದಿನ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಪಟನಾದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರೆಲ್ಲ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ನಿತೀಶ್ ಕುಮಾರ್ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನು ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ರವಿ ಶಂಕರ್ ಪ್ರಸಾದ್ ‘ನಿತೀಶ್ ಕುಮಾರ್ ತಮ್ಮನ್ನು ತಾವು ಭ್ರಷ್ಟಾಚಾರ ವಿರೋಧಿ, ಕಾಂಗ್ರೆಸ್ ಸಿದ್ಧಾಂತ ಇಷ್ಟಪಡದವನು ಎಂದೇ ಹೇಳಿಕೊಂಡು ಬಂದಿದ್ದರು. ಆದರೆ ಈಗ ಮಾಡಿದ್ದೇನು? ಅಂಥ ಕಾಂಗ್ರೆಸ್, ಭ್ರಷ್ಟಾಚಾರದೊಂದಿಗೇ ರಾಜಿಯಾದರು’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Bihar Politics | ನಿತೀಶ್ ಕುಮಾರ್ ಹೋಗೋದು ಬಿಜೆಪಿಗೆ ಗೊತ್ತಿತ್ತು, ಆದರೆ ಆ ನಿರೀಕ್ಷೆ ಇರಲಿಲ್ಲ !