ನವ ದೆಹಲಿ: ಚುನಾವಣೆಗಳಲ್ಲಿ ಬಿಜೆಪಿ ಎದುರು ಭಾರಿ ಅಂತರದ ಹಿನ್ನಡೆ ಕಾಣುತ್ತಿರುವ ಕಾಂಗ್ರೆಸ್ ರಾಜಕೀಯ ದೇಣಿಗೆ ಸಂಗ್ರಹದಲ್ಲೂ ಅದೇ ಸ್ಥಿತಿಯನ್ನು ಅನುಭವಿಸುತ್ತಿದೆ. ಉದ್ಯಮಗಳು ಮತ್ತು ವೈಯಕ್ತಿಕ ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದರೆ ಕಾಂಗ್ರೆಸ್‌ಗೆ ಇಲ್ಲೂ ಸೋಲಾಗಿದೆ. ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 2020-21ನೇ ಸಾಲಿನಲ್ಲಿ ಬಿಜೆಪಿ ಪಡೆದಿರುವ ದೇಣಿಗೆ 477 ಕೋಟಿ ರೂ. ಅದೇ ಹೊತ್ತಿಗೆ ಕಾಂಗ್ರೆಸ್ ಪಡೆದಿರುವುದು ಕೇವಲ 74 ಕೋಟಿ ರೂ!
ಬಿಜೆಪಿ ದೇಣಿಗೆ ಇಳಿಕೆ
ಪೋಲ್ ವಾಚ್‌ಡಾಗ್ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಬಿಜೆಪಿಯ ದೇಣಿಗೆ ಸಂಗ್ರಹ ಕಡಿಮೆಯಾಗಿದೆ. ಕಳೆದ ವರ್ಷ ಅದು 787 ಕೋಟಿ ರೂ. ಸ್ವೀಕರಿಸಿತ್ತು.
ದೇಣಿಗೆದಾರರ ಪಟ್ಟಿಯಲ್ಲೂ ಕಾಂಗ್ರೆಸ್ ಹಿನ್ನಡೆಯಲ್ಲಿದೆ. ಬಿಜೆಪಿಗೆ 2206 ಸಂಸ್ಥೆಗಳು ಮತ್ತು ವ್ಯಕ್ತಿಗಳು ದೇಣಿಗೆ ನೀಡಿದ್ದರೆ ಕಾಂಗ್ರೆಸ್‌ಗೆ ದೇಣಿಗೆ ನೀಡಿದವರು ಕೇವಲ 1059 ಮಾತ್ರ. ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ 26 ದೇಣಿಗೆದಾರರು 42.51 ಕೋಟಿ ರೂ. ದೇಣಿಗೆ ನೀಡಿದ್ದರೆ, ಎನ್‌ಸಿಪಿ 79 ಮಂದಿಯಿಂದ 26.26 ಕೋಟಿ ರೂ. ಸ್ವೀಕರಿಸಿದೆ. ಸಿಪಿಐಎಂಗೆ 226 ಮಂದಿ 12.85 ಕೋಟಿ ರೂ. ನೀಡಿದ್ದಾರೆ.
ಅಧಿಕಾರದಲ್ಲಿರುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ದೊರೆಯವುದು ಸಹಜವೇ ಆಗಿದೆ. ಆದರೆ, ಈಗ ಪ್ರಕಟವಾಗಿರುವ ದೇಣಿಗೆ ಪ್ರಮಾಣ ಪಕ್ಷಗಳು ನಾನಾ ಮೂಲಗಳಿಂದ ಪಡೆಯುವ ಒಟ್ಟಾರೆ ದೇಣಿಗೆಯಲ್ಲಿ ಅತ್ಯಲ್ಪ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘಟನೆ (ಎಡಿಆರ್) ಎಂಬ ಸ್ವಯಂಸೇವಾ ಸಂಘಟನೆಯ ಸ್ಥಾಪಕರು ಮತ್ತು ಟ್ರಸ್ತಿ ಆಗಿರುವ ಜಗದೀಪ್ ಚೋಕರ್ ಹೇಳುತ್ತಾರೆ.
ಬಿಎಸ್‌ಪಿಗೆ ದೇಣಿಗೆಯೇ ಇಲ್ಲ
ಯಾವುದೇ ಒಂದು ಪಕ್ಷಕ್ಕೆ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ 20,000 ರೂ.ಗಳಿಗಿಂತ ಹೆಚ್ಚು ದೇಣಿಗೆ ಬಂದರೆ ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ಆದರೆ, ಬಹುಜನ ಸಮಾಜ ಪಕ್ಷಕ್ಕೆ ಕಳೆದ ವರ್ಷ ಯಾರೊಬ್ಬರೂ ಈ ಮೊತ್ತದ ದೇಣಿಗೆಯನ್ನೇ ನೀಡಿಲ್ಲ ಎಂದು ತಿಳಿಸಲಾಗಿದೆ! ಹಾಗಾಗಿ ಪಟ್ಟಿಯಲ್ಲಿ ಅದಕ್ಕೆ ಶೂನ್ಯ ದೇಣಿಗೆ.
ಕಳೆದ ವರ್ಷ ಹೇಗಿತ್ತು?
2019-20ರಲ್ಲಿ ಕೂಡಾ ದೇಣಿಗೆ ಸ್ವೀಕಾರ ಪಟ್ಟಿಯಲ್ಲಿ ಬಿಜೆಪಿಯೇ ಅಗ್ರಸ್ಥಾನದಲ್ಲಿತ್ತು. ಬಿಜೆಪಿಗೆ 785 ಕೋಟಿ ರೂ. ದೇಣಿಗೆ ಬಂದಿದ್ದರೆ ಕಾಂಗ್ರೆಸ್‌ಗೆ 139 ಕೋಟಿ ರೂ. ಸಿಕ್ಕಿತ್ತು. ಇದೇ ವರ್ಷ ಎಲೆಕ್ಟೋರಲ್ ಬಾಂಡ್ ಮಾರಾಟದಲ್ಲೂ ಬಿಜೆಪಿ ಭಾರಿ ಮುಂದಿದೆ. ಮಾರಾಟವಾದ ಬಾಂಡ್‌ಗಳಲ್ಲಿ ಶೇಕಡಾ 75 ಬಿಜೆಪಿಯದ್ದು. ಕಾಂಗ್ರೆಸ್‌ನ ಪಾಲು ಕೇವಲ ಶೇ. 9 ಮಾತ್ರ.
ದೇಣಿಗೆ ಯಾರು ಕೊಡುತ್ತಾರೆ?
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರಲ್ಲಿ ಅಗ್ರ ಸ್ಥಾನದಲ್ಲಿರುವುದು ಖಾಸಗಿ ಕಂಪನಿಗಳು. ಇವುಗಳು ಹೆಚ್ಚಾಗಿ ಆಡಳಿತಾರೂಢ ಪಕ್ಷಗಳಿಗೆ ತಮ್ಮ ದೇಣಿಗೆಯನ್ನು ನೀಡುತ್ತವೆ. ಕೆಲವು ಖಾಸಗಿ ಕೆಲಸಗಳಿಗಾಗಿ ಈ ದೇಣಿಗೆಯನ್ನು ನೀಡಿದರೆ ಕೆಲವು ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಸಹಾಯಕವಾಗಿ ಬಳಕೆಯಾಗಲಿ ಎಂದು ದೇಣಿಗೆ ನೀಡುತ್ತವೆ. ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಪಕ್ಷದ ಮೇಲಿನ ಅಭಿಮಾನದಿಂದ ಹಣ ನೀಡುತ್ತವೆ.
ಇದನ್ನೂ ಓದಿ| Modi 8 years: ಮೋದಿ – ಶಾ ನೇತೃತ್ವದಲ್ಲಿ ಬಿಜೆಪಿ ಈ ಪರಿ ಬೆಳೆದಿದ್ದು ಹೇಗೆ?