ನವದೆಹಲಿ: ಬಿಜೆಪಿಗೆ ಸೇರಿಕೊಂಡರೆ ಎಲ್ಲಾ ಸಿಬಿಐ, ಇ.ಡಿ ಕೇಸುಗಳನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ನನಗೆ ಆಫರ್ ಬಂದಿದೆ ಎಂಬ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಹೇಳಿಕೆಯನ್ನು ಬಿಜೆಪಿ ʻಪಕ್ಕಾ ಸುಳ್ಳು” ಎಂದು ವ್ಯಾಖ್ಯಾನಿಸಿದೆ. ಅವರು ಭಾಂಗ್ ಸೇವಿಸಿ ಈ ಹೇಳಿಕೆ ನೀಡಿರಬಹುದು ಎಂದು ಗೇಲಿ ಮಾಡಿದೆ. ʻಹೇಳಿದವರು ಯಾರದು, ತೋರಿಸಿ ನಮಗೆʼ ಅಂತ ಸವಾಲು ಹಾಕಿದೆ.
ದಿಲ್ಲಿಯ ಅಬಕಾರಿ ನೀತಿಯಡಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐ ಇತ್ತೀಚೆಗೆ ಮನೀಷ್ ಸಿಸೋಡಿಯಾ ಅವರ ಮನೆಗೆ ದಾಳಿ ಮಾಡಿದೆ. ಈ ನಡುವೆ ಮನೀಷ್ ಸಿಸೋಡಿಯಾ ಅವರು ಟ್ವೀಟ್ ಮಾಡಿ, ಬಿಜೆಪಿ ನನಗೆ ಆಫರ್ ಮಾಡಿದೆ ಎಂದು ಹೇಳಿಕೊಂಡಿದ್ದರು.
ʻʻಮನೀಷ್ ಸಿಸೋಡಿಯಾ ಅವರು ಪ್ರತಿ ದಿನ ಪ್ರಾಣಾಯಾಮ ಮಾಡಬೇಕು. ಅವರೇನು ಭಾಂಗ್ ಸೇವಿಸಿದ್ದಾರಾ? ಅವರನ್ನು ಬಿಜೆಪಿ ಸೇರುವಂತೆ ಕೇಳಿಕೊಂಡ ವ್ಯಕ್ತಿಯ ಹೆಸರು ಅವರು ಹೇಳಬೇಕು.. ಅವರು ನೆಲದ ಮೇಲೆ ಬಿದ್ದು ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರೂ, ಮೂಗು ನೆಲಕ್ಕೆ ತಾಕುವಂತೆ ಮಾಡಿದರೂ ಬಿಜೆಪಿಗೆ ಅವರನ್ನು ತೆಗೆದುಕೊಳ್ಳಲಾಗುವುದಿಲ್ಲʼʼ ಎಂದಿದ್ದಾರೆ ಬಿಜೆಪಿ ನಾಯಕ ಪರ್ವೇಶ್ ವರ್ಮಾ.
ಈ ನಡುವೆ ಬಿಜೆಪಿ ನಾಯಕ ಗೌರವ ಭಾಟಿಯಾ ಅವರು ಮನೀಷ್ ಜತೆಗೆ ಅರವಿಂದ್ ಕೇಜ್ರಿವಾಲ್ ಅವರ ಮೇಲೂ ವಾಗ್ದಾಳಿ ನಡೆಸಿದೆ. ʻʻಅಬಕಾರಿ ನೀತಿಗೆ ಸಂಬಂಧಿಸಿ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಅರವಿಂದ ಕೇಜ್ರಿವಾಲ್ ಅವರು ಮೌನ ವಹಿಸಿರುವುದು ನೋಡಿದರೆ ಅವರು ಕೂಡಾ ಕಟ್ಟಾ ಅಪ್ರಾಮಾಣಿಕ ಎನ್ನುವುದು ಸ್ಪಷ್ಟವಾಗುತ್ತದೆʼʼ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ೨೪ ಗಂಟೆಗಳ ಕಾಲಾವಕಾಶ ನೀಡಿದೆ.
ದಿಲ್ಲಿಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವಿನ ಜಗಳ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಕಳೆದ ಶುಕ್ರವಾರ ದಿಲ್ಲಿ ಸರಕಾರದ ಹೊಸ ಅಬಕಾರಿ ನೀತಿ ಸಂಬಂಧ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದು ಸಿಬಿಐ ತನಿಖೆಗಾಗಿ ದಾಳಿ ನಡೆದಾಗ ಇದು ಇನ್ನಷ್ಟು ಜೋರಾಗಿದೆ. ಸಿಸೋಡಿಯ ಆವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ತಾನು ಕೇಜ್ರಿವಾಲ್ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೇ ಒಂದು ಅಪರಾಧವಾಗಿ ಹೋಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ | ಬಿಜೆಪಿ ಸೇರಿದರೆ ನಿಮ್ಮ ಮೇಲಿನ ಸಿಬಿಐ, ಇ.ಡಿ ಕೇಸೆಲ್ಲ ಕ್ಲೋಸ್!: ಸಿಸೋಡಿಯಾಗೆ ಕಮಲ ಪಕ್ಷ ಆಫರ್ ಮಾಡಿದೆಯಂತೆ