Site icon Vistara News

Jayant Sinha: ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Jayant Sinha

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಈ ಬಾರಿ ಟಿಕೆಟ್‌ ಸಿಗದೇ ಬೇಸರಗೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾ(Jayant Sinha)ಗೆ ಬಿಜೆಪಿ ಶೋಕಾಸ್‌ ನೊಟೀಸ್(Show cause Notice) ಜಾರಿ ಮಾಡಿದೆ. ಜಯಂತ್‌ ಸಿನ್ಹಾ ನಿನ್ನೆ ನಡೆದಿದ್ದ 5 ನೇ ಹಂತದ ಚುನಾವಣೆ(Fifth phase Election) ವೇಳೆ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಅದೂ ಅಲ್ಲದೇ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಪಕ್ಷದ ವರಿಷ್ಠರು ಕಾರಣ ವಿವರಿಸುವಂತೆ ಒತ್ತಾಯಿಸಿ ನೊಟೀಸ್ ಜಾರಿಗೊಳಿಸಿದೆ.

ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಕಳೆದ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿ ಆಗಿದ್ದ ಸಿನ್ಹಾ ಅವರಿಗೆ ಈ ಬಾರಿ ಪಕ್ಷ ಟಿಕೆಟ್‌ ನೀಡಿರಲಿಲ್ಲ. ಈ ಬಾರಿ ಜಯಂತ್‌ ಸಿನ್ಹಾ ಬದಲಿಗೆ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದ ಜಯಂತ್ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ಮಾದರಿಯಲ್ಲಿ ದೆಹಲಿಯ ಸಂಸದ ಗೌತಮ್ ಗಂಭೀರ್ ಸಹ ತಮ್ಮನ್ನು ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಅಲ್ಲದೇ ಚುನಾವಣಾ ಪ್ರಚಾರ ಕಾರ್ಯದಲ್ಲೂ ಅವರು ಭಾಗಿಯಾಗಿರಲಿಲ್ಲ.

ಇದೀಗ ಅವರಿಗೆ ನೊಟೀಸ್‌ ಜಾರಿಗೊಳಿಸಿರುವ ಬಿಜೆಪಿ, ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಮತ ಚಲಾಯಿಸುವ ಅಗತ್ಯವಿದೆ ಎಂದೆನಿಸಲೂ ಇಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಬಗ್ಗೆ ತಕ್ಷಣ ಕಾರಣ ಸಮೇತ ವಿವರಿಸುವಂತೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಅದೂ ಅಲ್ಲದೇ ಕೇವಲ ಎರಡು ದಿನಗಳಲ್ಲಿ ತಮ್ಮ ನಿಲುವನ್ನು ವಿವರಿಸುವಂತೆ ಪಕ್ಷ ಸಿನ್ಹಾ ಅವರನ್ನು ಕೇಳಿದೆ. ಇನ್ನು ಪಕ್ಷದ ವರಷ್ಠರು ಕಳಿಸಿರುವ ಈ ನೊಟೀಸ್‌ಗೆ ಸಿನ್ಹಾ ಇನ್ನೂ ಪ್ರತಿಕ್ರಿಯಿಸಿಲ್ಲ. ಸಿನ್ಹಾ ಅವರು 2019 ರಲ್ಲಿ ಕಾಂಗ್ರೆಸ್‌ನ ಗೋಪಾಲ್ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ: Lok Sabha Election: 5ನೇ ಹಂತದಲ್ಲಿ ಕೇವಲ ಶೇ.57.5ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Exit mobile version