ಪಟನಾ: ರಾಜ್ಯಸಭಾ ಸಂಸದ, ಬಿಜೆಪಿ ನಾಯಕ ಸುಶೀಲ್ ಮೋದಿ ರಾಜಕೀಯ ಚಾಣಾಕ್ಷರಲ್ಲಿ ಒಬ್ಬರು. ಪ್ರತಿಪಕ್ಷಗಳ ನಡೆಯನ್ನು ಸೂಕ್ಷ್ಮವಾಗಿ ಅರಿಯಬಲ್ಲವರು. ವಿಪಕ್ಷಗಳ ಹೆಜ್ಜೆಯನ್ನು ಅರಿಯುವ ಸಾಮರ್ಥ್ಯ ಅವರಿಗೆ ಕರಗತ. ತಮ್ಮ ಸಾಮರ್ಥ್ಯ, ಆಕ್ರಮಣಕಾರಿ ಕಾರ್ಯತಂತ್ರಗಳ ಮೂಲಕ, ಪ್ರಮುಖ ಮಾಹಿತಿಗಳನ್ನೆಲ್ಲ ಕ್ಷಣಾರ್ಧದಲ್ಲಿ ಸಂಗ್ರಹಿಸಿಬಿಡುತ್ತಾರೆ. ಸದಾ ಪ್ರತಿಪಕ್ಷಗಳ ಮೇಲೆ ಕಣ್ಣಿಡುವ ಸುಶೀಲ್ ಮೋದಿ, ಯಾವುದೇ ಒಂದು ವಿವಾದಾತ್ಮಕ ವಿಷಯಗಳು ಎದ್ದಾಗ ಅದಕ್ಕೆ ಸಂಬಂಧಪಟ್ಟ ಸಾಕ್ಷಿಯನ್ನೆಲ್ಲ ತ್ವರಿತವಾಗಿ ಸಂಗ್ರಹಿಸಿ, ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾರೆ. ಹಾಗೇ, ಟ್ವಿಟರ್ನಲ್ಲಿ ಕೂಡ ಸದಾ ಸಕ್ರಿಯವಾಗಿರುತ್ತಾರೆ.
ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಹಾಳಾಗಿ, ಮಹಾ ಘಟ್ ಬಂಧನ್ ಸರ್ಕಾರ ರಚನೆಯಾದ ಹೊತ್ತಲ್ಲಿ, ಸುಶೀಲ್ ಮೋದಿ ಬಗ್ಗೆ ಇಷ್ಟು ನಿರೂಪಣೆ ಯಾಕೆ? ಎಂಬ ಪ್ರಶ್ನೆ ಮೂಡಬಹುದು !-ಹಾಗೇ, ಪ್ರತಿಪಕ್ಷಗಳ ಸಣ್ಣ ನಡೆಯನ್ನೂ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರುವ ಸುಶೀಲ್ ಮೋದಿ ಇದ್ದಾಗ್ಯೂ ಬಿಹಾರ ಬಿಜೆಪಿಗೆ ಅದು ಹೇಗೆ ಕೈತಪ್ಪಿ ಹೋಯಿತು ಎಂಬುದೂ ಸಹಜ ಕುತೂಹಲ. ಆದರೆ, ಸುಶೀಲ್ ಮೋದಿಯನ್ನು ಬಿಹಾರ ಸಕ್ರಿಯ ರಾಜಕಾರಣದಲ್ಲಿ ಇಡದೆ, ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇ ಬಿಜೆಪಿಗೆ ಮುಳ್ಳಾಯಿತು ಎಂಬುದೇ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.. ಮತ್ತು ಉತ್ತರ !
ಸುಶೀಲ್ ಮೋದಿ ಕಡೆಗಣನೆ !
ಯಾವುದೇ ರಾಷ್ಟ್ರೀಯ ಪಕ್ಷವಿರಲಿ, ಪ್ರಾದೇಶಿಕ ರಾಜಕೀಯ ಪಕ್ಷವಿರಲಿ. ಅತ್ಯಂತ ವಾಸ್ತವಿಕವಾಗಿ ಅವುಗಳನ್ನು ವಿಶ್ಲೇಷಿಸಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯಾಗಿದ್ದ ಸುಶೀಲ್ ಮೋದಿ, ಅದರ ಆಧಾರದ ಮೇಲೆ ಆಡಳಿತ ಸರ್ಕಾರಕ್ಕೆ ಸಲಹೆ-ಸೂಚನೆ ಕೊಡುತ್ತಿದ್ದರು. 2017ರಿಂದ 2020ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ, ಹಣಕಾಸು ಇಲಾಖೆಯನ್ನೂ ನಿರ್ವಹಣೆ ಮಾಡಿದ್ದಾರೆ. ಆದರೆ ಇಷ್ಟೆಲ್ಲ ಆದರೂ ಬಿಜೆಪಿ ಅವರನ್ನು ಕಡೆಗಣಿಸಿದೆ ಎಂಬ ಮಾತು ಬಲವಾಗಿ ಕೇಳಿಬಂದಿದೆ. ಪ್ರತಿಪಕ್ಷಗಳ ನಾಯಕರೇ ಅದನ್ನು ಹೇಳುತ್ತಿದ್ದರು. ಇಷ್ಟೆಲ್ಲ ಆದ ಮೇಲೆ 2020ರಲ್ಲಿ ಸುಶೀಲ್ ಮೋದಿಯನ್ನು ಬಿಜೆಪಿ ರಾಜ್ಯಸಭೆಗೆ ಕಳಿಸಿತು. ಅದಾದ ಮೇಲೆ ಅವರು ಬಿಹಾರವನ್ನು ಬಿಟ್ಟರು. ಇಲ್ಲಿನ ರಾಜಕಾರಣದಿಂದ ದೂರವೇ ಆದರು. ಆಗ ನಿತೀಶ್ ಕುಮಾರ್ ಕೂಡ ಒಂದೆರಡು ಸಂದರ್ಭದಲ್ಲಿ ಮೋದಿಯನ್ನು ನೆನಪಿಸಿಕೊಂಡಿದ್ದುಂಟು. ‘ಈ ಹೊತ್ತಲ್ಲಿ ಸುಶೀಲ್ ಮೋದಿ ಇರಬೇಕಿತ್ತು. ಅವರು ಯಾವುದೇ ವಿಷಯವನ್ನು ನೋಡುವ ದೃಷ್ಟಿಕೋನವೇ ಬೇರೆ’ ಎಂದು ನಿತೀಶ್ ಹೇಳುತ್ತಿದ್ದರು.
ಲಾಲೂ ಪ್ರಸಾದ್ ಯಾದವ್ ಕುಟುಂಬವೇ ಟಾರ್ಗೆಟ್
ಈ ಹಿಂದೆ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಜತೆ ಸೇರಿ ಮಹಾಘಟ್ ಬಂಧನ್ ಸರ್ಕಾರ ಮಾಡಿದ ಸಂದರ್ಭದಲ್ಲಿ, ಲಾಲೂ ಪ್ರಸಾದ್ ಪಕ್ಕದಿಂದ ನಿತೀಶ್ ಕುಮಾರ್ರನ್ನು ಮತ್ತೆ ಎಳೆದುಕೊಂಡು ಬರುವಲ್ಲಿ ಸುಶೀಲ್ ಮೋದಿ ಪಾತ್ರ ದೊಡ್ಡದು. ಲಾಲೂ ಪ್ರಸಾದ್ ಯಾದವ್ ಕುಟುಂಬದ ಭ್ರಷ್ಟಾಚಾರ, ಅವರು ಗಳಿಸಿಕೊಂಡ ಅಕ್ರಮ ಹಣದ ಬಗ್ಗೆ ಜನರಿಗೆ ತಿಳಿಸಿದರು. ಸೋಷಿಯಲ್ ಮೀಡಿಯಾ ಅಕೌಂಟ್ಗಳು, ಸಾಲುಸಾಲು ಸುದ್ದಿಗೋಷ್ಠಿಗಳ ಮೂಲಕ ಲಾಲೂ ಪ್ರಸಾದ್ ಯಾದವ್ ಅವರ ಅಕ್ರಮಗಳನ್ನು ಹೇಳಿದ್ದೇ ಹೇಳಿದ್ದು !. ಪಟನಾ ಮೃಗಾಲಯಕ್ಕಾಗಿ, ಮಾಲ್ನ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಮಣ್ಣು ಹಗರಣಗಳ ಸಾಕ್ಷಿಗಳನ್ನು ಸುಶೀಲ್ ಮೋದಿ ಒದಗಿಸಿದರು. ಇವೆರಡು ಕೇಸ್ನ ತನಿಖೆ ನಡೆಯುತ್ತಿದ್ದಾಗಲೇ, ಲಾಲೂ ಕುಟುಂಬದ ಉಳಿದೆಲ್ಲ ಭ್ರಷ್ಟ ವ್ಯವಹಾರಗಳನ್ನೂ ದಾಖಲೀಕರಿಸಿದ್ದರು. ರಾಬ್ರಿ ದೇವಿ 18 ಫ್ಲ್ಯಾಟ್ಗಳನ್ನು ಹೊಂದಿದ್ದಾರೆ ಎಂಬುದನ್ನೂ ಮೊದಲು ಹೇಳಿದ್ದು ಸುಶೀಲ್ ಮೋದಿಯೇ. ಇಷ್ಟೆಲ್ಲ ಆಗಿದ್ದು 2017ರಲ್ಲಿ.
ಬಿಹಾರದಲ್ಲಿ 2017ರಲ್ಲಿ ಮಹಾ ಘಟ್ ಬಂಧನ್ ಸರ್ಕಾರವನ್ನು ಪತನ ಮಾಡಿ, ನಿತೀಶ್ ಕುಮಾರ್ ಮತ್ತೆ ಬಿಜೆಪಿಗೆ ಸೇರುವಂತೆ ಮಾಡಿದ ನಂತರ, ಇವರ ಆಕ್ರಮಣಮಕಾರಿ ವಾಗ್ದಾಳಿ, ದಾಖಲೆಗಳೊಂದಿಗೆ ಲಾಲೂ ಪ್ರಸಾದ್ ಕುಟುಂಬವನ್ನು ಅಲ್ಲಾಡಿಸಿದ್ದನ್ನು ನೋಡಿದ ಮೇಲೆ, ಕೇಂದ್ರ ಬಿಜೆಪಿ ಸರ್ಕಾರಕ್ಕೂ ಇವರ ಸಾಮರ್ಥ್ಯ ಅರ್ಥವಾಗಿತ್ತು. ಪ್ರತಿಪಕ್ಷಗಳಂತೂ ಸುಶೀಲ್ ಮೋದಿಯನ್ನು ಒಬ್ಬ ವಿಲನ್ನಂತೆ ನೋಡುತ್ತಿದ್ದವು. ಹಾಗೇ, ಅವರ ಸಾಮರ್ಥವನ್ನು ಮೆಚ್ಚಿಕೊಂಡಿದ್ದೂ ಇದೆ. ಇಷ್ಟೆಲ್ಲ ಆದ ಮೇಲೆ ಕೂಡ ಬರುಬರುತ್ತ ಸುಶೀಲ್ ಮೋದಿಯನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಲಾಯಿತು. ಬಿಹಾರ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡಲಿಲ್ಲ. ಹೀಗೆ ಸುಶೀಲ್ ಮೋದಿಯನ್ನು ಬಿಹಾರ ಸಕ್ರಿಯ ರಾಜಕಾರಣದಿಂದ ದೂರವಿಟ್ಟಿದ್ದಕ್ಕೆ, ಈಗ ಬಿಜೆಪಿ ಬೆಲೆ ತೆರುತ್ತಿದೆ ಎಂಬುದು ರಾಜಕೀಯ ವಲಯದಿಂದ ಕೇಳಿ ಬರುತ್ತಿರುವ ಅಭಿಪ್ರಾಯ.
ಇದನ್ನೂ ಓದಿ: Bihar politics | ಬಿಹಾರ ಕ್ಯಾಬಿನೆಟ್‌ನಲ್ಲಿ ಆರ್‌ಜೆಡಿಗೆ ಸಿಂಹಪಾಲು?