ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಎಲ್ಲ ಪಕ್ಷಗಳು, ಮೈತ್ರಿಕೂಟಗಳು, ನಾಯಕರು ಇನ್ನಿಲ್ಲದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆಯೇ, ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟ (NDA Alliance) ಸೇರಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಗೆಲುವು, ನಿತೀಶ್ ಕುಮಾರ್ (Nitish Kumar) ಅವರು ‘ಘರ್ ವಾಪ್ಸಿ’ ಆಗಿರುವುದು ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಇಮ್ಮಡಿಗೊಳಿಸಿವೆ. ಸಹಜವಾಗಿಯೇ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು (BJP) ಇದರ ಲಾಭ ಪಡೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಯಾವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ?
ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಛತ್ತೀಸ್‌ಗಢ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈಗ ಬಿಹಾರ ಕೂಡ ಎನ್‌ಡಿಎ ಮೈತ್ರಿಕೂಟದ ಆಡಳಿತಕ್ಕೆ ಒಳಪಟ್ಟಿದೆ. ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತಿದ್ದಾರೆ.
170 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ
ಹಿಂದಿ ಭಾಷಿಕ ರಾಜ್ಯಗಳ ಒಟ್ಟು 218 ಲೋಕಸಭೆ ಕ್ಷೇತ್ರಗಳ ಪೈಕಿ ಈಗ 170 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ಬಿಹಾರದಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ಹೊಂದಿದ್ದರೂ ಎನ್‌ಡಿಎ ಮೈತ್ರಿಕೂಟದ 39 ಸಂಸದರು (ಬಿಜೆಪಿ 17, ಆರ್‌ಜೆಡಿ 16, ಎಲ್‌ಜೆಪಿ 6) ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮಾತ್ರವಲ್ಲ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪರ ಒಲವಿದೆ. ರಾಜ್ಯಗಳಲ್ಲೂ ಬಿಜೆಪಿ ಆಡಳಿತವಿರುವ ಕಾರಣ ಲೋಕಸಭೆ ಚುನಾವಣೆ ಗೆಲ್ಲಲು ಈ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎನ್ನಲಾಗುತ್ತಿದೆ.
ಇಂಡಿಯಾ ಒಕ್ಕೂಟ ದುರ್ಬಲ
ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗುವ ಬೆನ್ನಲ್ಲೇ ಇಂಡಿಯಾ ಒಕ್ಕೂಟವು ದುರ್ಬಲವಾಗಿರುವುದು ಕೂಡ ಎನ್‌ಡಿಎಗೆ ವರದಾನವಾಗಲಿದೆ. ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾದಂತಾಗಿದೆ. ಈಗಾಗಲೇ ಇಂಡಿಯಾ ಒಕ್ಕೂಟದಿಂದ ಹೊರಬಂದಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ.
ಇದನ್ನೂ ಓದಿ: INDIA Bloc: ನಿತೀಶ್ ಕುಮಾರ್ ಇಂಡಿಯಾ ಕೂಟ ತೊರೆಯಲು ಅಸಲಿ ಕಾರಣ ಇದು!
ಪಂಜಾಬ್‌ನಲ್ಲಿ ಆಪ್ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಈಗಾಗಲೇ ಕಾಂಗ್ರೆಸ್ ದುಸ್ಥಿತಿಯಲ್ಲಿರುವ ಕಾರಣ ಲೋಕಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎಂಬುದು ರಾಜಕೀಯ ತಜ್ಞರ ಅಂಬೋಣವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ