Site icon Vistara News

Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ

Narendra Modi To Meet NDA Leaders

ನರೇಂದ್ರ ಮೋದಿ

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರನ್ನು ಸಂಪರ್ಕಿಸಲು, ಅವರ ಗಮನ ಸೆಳೆಯಲು ಬಿಜೆಪಿಯು ಒಂದು ತಿಂಗಳು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ. 2014ರ ಮೇ 26ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಪ್ರಸಕ್ತ ವರ್ಷದ ಮೇ 26ರಂದು ಸರ್ಕಾರಕ್ಕೆ 9 ವರ್ಷ ತುಂಬಲಿದೆ. ಹಾಗಾಗಿ, ಬಿಜೆಪಿಯು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮೇ 30ರಿಂದ ಜೂನ್‌ 30ರ ಅವಧಿಯಲ್ಲಿ ಒಂದು ತಿಂಗಳು ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೇ 30ರಂದು ನರೇಂದ್ರ ಮೋದಿ ಅವರು ಬೃಹತ್‌ ರ‍್ಯಾಲಿ ಮೂಲಕ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ದೇಶಾದ್ಯಂತ ಬಿಜೆಪಿಯ ಪ್ರಮುಖ ನಾಯಕರು 51 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಹಾಗೆಯೇ, ದೇಶದ 396 ಲೋಕಸಭೆ ಕ್ಷೇತ್ರಗಳಲ್ಲಿ ಕೇಂದ್ರದ ಒಬ್ಬ ಸಚಿವರು ಅಥವಾ ರಾಷ್ಟ್ರೀಯ ನಾಯಕರು ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನಡೆಯುವ ರಾಜ್ಯಗಳಿಗೆ ಆದ್ಯತೆ

ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಸಂಭ್ರಮಾಚರಣೆಯ ಜತೆಗೆ ಮತಗಳ ಬೇಟೆಗೂ ಯೋಜನೆ ರೂಪಿಸಿದೆ. ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರ‍್ಯಾಲಿಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಸಾರ್ವಜನಿಕ ಸಭೆ, ಸಮಾವೇಶಗಳ ಮೂಲಕ ಕೇಂದ್ರ ಸರ್ಕಾರದ ಸಾಧನೆ, ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: Karnataka Election Results: ರಾಜ್ಯದ 49 ಕ್ಷೇತ್ರಗಳಲ್ಲಿ ಮೋದಿ ರ‍್ಯಾಲಿ, ರೋಡ್‌ ಶೋ, ಇವುಗಳಲ್ಲಿ ಬಿಜೆಪಿ ಗೆದ್ದಿದ್ದೆಷ್ಟು?

ಬಿಜೆಪಿ ಮುಖ್ಯಮಂತ್ರಿಗಳು, ಆಯಾ ರಾಜ್ಯಗಳಲ್ಲಿರುವ ಪ್ರತಿಪಕ್ಷಗಳ ನಾಯಕರು, ಬಿಜೆಪಿ ಸಂಸದರು, ಸಚಿವರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಲೋಕಸಭೆ ಕ್ಷೇತ್ರಗಳಲ್ಲಿ 250 ಕುಟುಂಬಗಳಂತೆ ದೇಶಾದ್ಯಂತ 2.5 ಲಕ್ಷ ಕುಟುಂಬಗಳನ್ನು ಸಂಪರ್ಕಿಸವುದು ಕೂಡ ಕಾರ್ಯಕ್ರಮದ ಭಾಗವಾಗಿದೆ. ಪ್ರಮುಖವಾಗಿ, ಕಲಾವಿದರು, ಕ್ರೀಡಾಪಟುಗಳು, ಉದ್ಯಮಿಗಳು ಸೇರಿ ಬೇರೆಯವರ ಮೇಲೆ ಪ್ರಭಾವ ಬೀರುವ ಕುಟುಂಬಸ್ಥರನ್ನು ಬಿಜೆಪಿ ನಾಯಕರು ಸಂಪರ್ಕಿಸಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version